ಕುವೆಂಪುಗೆ ಮರಣೋತ್ತರ ಭಾರತರತ್ನ ನೀಡಲು ಸಿಎಂಗೆ ಮನವಿ

| Published : Aug 30 2025, 01:00 AM IST

ಸಾರಾಂಶ

ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಕೇಳದವರಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುರಾಷ್ಟ್ರಕವಿ ಕುವೆಂಪು ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕೆಂದು ಕೋರಿ ಹಾಗೂ ಪ್ರಧಾನಿ ಅವರಿಗೆ ಈ ನಿಟ್ಟಿನಲ್ಲಿ ಮನವಿ ಮಾಡಲೆಂದು ಆ. 31ರಂದು ನಗರಕ್ಕೆ ಆಗಮಿಸುವ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸುವುದಾಗಿ ಕುವೆಂಪು ವಿಶ್ವ ಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ತಿಳಿಸಿದೆ.ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಕೇಳದವರಿಲ್ಲ. ಅವರು ಕನ್ನಡ ಸಾಹಿತ್ಯ, ಸಂಸ್ಕೃತಿಯ ಶತ ಪುರುಷರೂ ಆಗಿದ್ದಾರೆ. ಯುಗದ ಕವಿ, ಜಗದ ಕವಿ ಎಂದೇ ಬಣ್ಣಿತರಾದವರಾಗಿದ್ದಾರೆ. ಇವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಇವರನ್ನು ವಿಶ್ವ ಮಾನವ ಸಂದೇಶದ ಕಾರಣರಿಂದಾಗಿ ವಿಶ್ವರತ್ನರೆಂದರೂ ತಪ್ಪೇನಿಲ್ಲ ಎಂದು ಅವರು ಹೇಳಿದರು.ಅವರ ಬದುಕಿದ್ದಾಗಲೇ ಭಾರತ ರತ್ನ ನೀಡಿದ್ದರೆ ವಿಶೇಷವಾದ ಅರ್ಥ ಇರುತ್ತಿತ್ತು. ದುರದೃಷ್ಟವಶಾತ್ ಸಿಗಲಿಲ್ಲ. ಅವರ ಕೃತಿಗಳೇನಾದರೂ ಆಗಲೇ ಇಂಗ್ಲಿಷ್‌ಗೆ ಅನುವಾದಗೊಂಡಿದಿದ್ದಲ್ಲಿ ನೊಬೆಲ್ ಪ್ರಶಸ್ತಿ ಖಂಡಿತ ದೊರಕುತ್ತಿತ್ತು. ಆದ ಕಾರಣ ಈಗಲಾದರೂ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಅವರು ಕೋರಿದರು.ಪ್ರೊ.ಸಿ. ನಾಗಣ್ಣ ಮಾತನಾಡಿ, ನಾವೀಗ ಸಕಾರಾತ್ಮಕ ಯೋಚನೆ ಕಾಲಘಟ್ಟದಲ್ಲಿದ್ದೇವೆ. ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಕನ್ನಡಿಗರ ಮನಸ್ಸಿನಲ್ಲಿ ಮೂಡಿದೆ. ಇದರಿಂದ ಕನ್ನಡ ಭಾಷೆ ಬೆಳವಣಿಗೆ ಆಗುತ್ತದೆ. ಕನ್ನಡಿಗರ ದೃಷ್ಟಿಯಿಂದ ಹೊಸ ಸಂಚಲನ ಉಂಟಾಗುತ್ತದೆ. ಅಲ್ಲದೆ ರಾಜ್ಯದ ಅಭಿವೃದ್ಧಿಗೂ ನಾಂದಿ ದೊರೆಯುತ್ತದೆ ಎಂದರು.ಟ್ರಸ್ಟ್ ಅಧ್ಯಕ್ಷ ಎಚ್.ಕೆ. ರಾಮು ಮಾತನಾಡಿ, ಈ ಮನವಿ ಪತ್ರ ಸಲ್ಲಿಕೆಯನ್ನು ಶಾಸಕರಾದ ಜಿ.ಟಿ. ದೇವೇಗೌಡ, ಹರೀಶ್‌ ಗೌಡ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮೊದಲಾದವರು ಬೆಂಬಲಿಸಿದ್ದು, ಸಿಎಂಗೆ ಮನವಿ ಸಲ್ಲಿಕೆ ವೇಳೆ ಹಾಜರಿರುವರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಮದ್ರಶೇಖರ ಕಂಬಾರ, ಸಂಸದ ಯದುವೀರ್ ಮೊದಲಾದವರು ಕೂಡ ಬೆಂಬಲಿಸಿದ್ದಾರೆ ಎಂದರು.ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಜಯಣ್ಣ ಮೊದಲಾದವರು ಇದ್ದರು.