ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಭಾರತ ಪುಣ್ಯ ಭೂಮಿ, ಅಧ್ಯಾತ್ಮದ ತವರೂರು. ಸರ್ವ ಧರ್ಮಗಳ ಸಂಗಮ. ಅಂತೆಯೇ ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ 65 ಕೋಟಿ ಭಾರತೀಯರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ತಮ್ಮ ಜನ್ಮ ಪಾವನ ಮಾಡಿಕೊಂಡಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಕಾಗವಾಡ ತಾಲೂಕಿನ ಕೃಷ್ಣಾ-ಕಿತ್ತೂರ ಗ್ರಾಮಕ್ಕೆ ಲಿಂ.ಮಲ್ಲಿಕಾರ್ಜುನ ಮಹಾಸ್ವಾಮೀಜಿ ಕೃಷ್ಣಾ-ಕಿತ್ತೂರ ಗ್ರಾಮಕ್ಕೆ ಪಾದಾರ್ಪಣೆ ಮಾಡಿ 75 ವರ್ಷಗಳಾಗಿದ್ದು ಅವರ ಅಮೃತ ಮಹೋತ್ಸವ ಹಾಗೂ ಬಸವೇಶ್ವರ ಶ್ರೀಗಳು ಈ ಗ್ರಾಮಕ್ಕೆ ಗುರು ಸ್ವೀಕಾರ ಮಾಡಿ 25 ವರ್ಷಗಳಾಗಿದ್ದು ರಜತ ಮಹೋತ್ಸವ ಕಾರ್ಯಕ್ರಮದಲ್ಲಿ 75 ವರ್ಷ ತುಂಬಿದ 75 ಜನ ಶರಣ, ಶರಣೆಯರ ಸನ್ಮಾನಿಸಿ ಮಾತನಾಡಿದರು.
ಲಿಂ.ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಲಿಂ.ಸಿದ್ದೇಶ್ವರ ಶ್ರೀಗಳು ಲೋಕಕಲ್ಯಾಣಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಮನುಷ್ಯನ ಬದುಕಿಗೆ ಶಾಂತಿ, ನೆಮ್ಮದಿ ಮುಖ್ಯ. ಸುಖ-ಶಾಂತಿ ಸಹಬಾಳ್ವೆ, ಸೌಹಾರ್ದತೆ, ಸಾಮರಸ್ಯ, ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಮತ್ತು ರಾಷ್ಟ್ರಾಭಿಮಾನ ಹಿಂದೂಗಳ ರಕ್ತದಲ್ಲಿದೆ. ಈ ದೇಶದಲ್ಲಿ ಲಿಂ.ಮಲ್ಲಿಕಾರ್ಜುನ ಶ್ರೀ, ಸಿದ್ದೇಶ್ವರ ಶ್ರೀಗಳಂತ ಹಲವಾರು ಸಾಧು-ಸಂತರು ಜನ್ಮ ತಾಳಿದ ಪುಣ್ಯ ಭೂಮಿ ಭಾರತ ಎಂದರು.ಇಂಥ ಪುಣ್ಯ ಭೂಮಿಯಲ್ಲಿ 65 ಕೋಟಿ ಜನ ಭಾರತೀಯರು ಸ್ವಯಂಪ್ರೇರಿತರಾಗಿ ಪುಣ್ಯಸ್ನಾನ ಮಾಡಿದ್ದಾರೆಂದರೆ ಅದು ನಮ್ಮ ಭಾರತದ ಸಂಸ್ಕೃತಿ. ಇಲ್ಲಿ ಮೇಲು-ಕೀಳು, ಬಡವ, ಶ್ರೀಮಂತ ಎಂಬ ಭೇದ-ಭಾವವಿಲ್ಲ. ಹಿಂದೂತ್ವ ವಿರೋಧಿಸುವ ಅದೇಷ್ಟೋ ನಾಯಕರು ಯಾರಿಗೂ ಗೊತ್ತಾಗದ ಹಾಗೆ ರಾತ್ರೋ ರಾತ್ರಿ ಗಪ್ ಚುಪ್ ಆಗಿ ಹೋಗಿ ಪುಣ್ಯ ಸ್ನಾನ ಮಾಡಿ ಬಂದಿದ್ದಾರೆ. ಇದು ನಮ್ಮ ಸನಾತನ ಹಿಂದೂಧರ್ಮಕ್ಕೆ ಇರುವ ಶಕ್ತಿ ಎಂದರು.
ಯಂಕಚ್ಚಿ ಮಲ್ಲಿಕಾರ್ಜುನ ತಪೋವನದ ಗುರುಪಾದ ಮಹಾಸ್ವಾಮೀಜಿ ಮಾತನಾಡಿ, ಬಸವೇಶ್ವರ ಶ್ರೀ ಸೇವೆ ಮಾಡಿದರೆ, ನೀವು ಮಲ್ಲಿಕಾರ್ಜುನ ಶ್ರೀ ಹಾಗೂ ಶ್ರೀ ಸಿದ್ದೇಶ್ವರ ಶ್ರೀ ಸೇವೆ ಮಾಡಿದಂತೆ. ಬಸವೇಶ್ವರ ಶ್ರೀಗಳು ಇಡೀ ಗುರು ಬಳಗದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಪ್ರೀಯವಾದ ಶಿಷ್ಯರಾಗಿದ್ದರು. ಅಂಥವರ ಸೇವೆ ಮಾಡಿದರೆ ಈ ಗ್ರಾಮ ಕೈಲಾಸವಾಗುತ್ತದೆ ಎಂದರು.ಕಾಡಿನಿಂದ ನಾಡಿಗೆ ಬಂದ ಹುಲಿ ಗರ್ಜಿಸದೇ ಬಿಡದು, ಅದು ತನ್ನಶೌರ್ಯ ತೋರಿಸಿಯೇ ಹೋಗುತ್ತದೆ. ಹಾಗೆ ಹಿಂದೂ ಹುಲಿ ಬಸನಗೌಡ ಪಾಟೀಲ ಯತ್ನಾಳ ಅವರು ಹಿಂದೂ ಧರ್ಮದ ಸಂರಕ್ಷಣೆಗಾಗಿ ಹೋರಾಡುವ ಶಕ್ತಿಯನ್ನು ಭಗವಂತ ಇನ್ನಷ್ಟು ನೀಡಲಿ.
ಬಸನಗೌಡ ಪಾಟೀಲರಿಗೆ ಪೂಜ್ಯರು ಅನ್ನಬೇಕೋ, ನಮ್ಮ ದೇಶದ ಶ್ರೇಷ್ಠ ನಾಯಕರು ಎನ್ನಬೇಕೋ ಗೊತ್ತಿಲ್ಲ. ಸನಾತನ ಹಿಂದೂ ಧರ್ಮದ ಉಳುವಿಗಾಗಿ ಹಗಲಿರುಳು ಹೋರಾಡುತ್ತಿರುವ ಬಸನಗೌಡ ಪಾಟೀಲರು ಮುಂದಿನ ಪ್ರಧಾನಿಯಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.ಕಕಮರಿ ಗುರುದೇವಾಶ್ರಮದ ಶ್ರೀ ಆತ್ಮಾರಾಮ ಶ್ರೀ, ಬಸವೇಶ್ವರ ಶ್ರೀ ಆಶೀರ್ವಚನ ನೀಡಿದರು. ಐನಾಪುರ ಪಪಂ ಸದಸ್ಯ ಪ್ರವೀಣ ಗಾಣಿಗೇರ ಉಪಸ್ಥಿತರಿದ್ದು, ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಂತ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು.