ಪುರಾತನ ಶಿಲ್ಪಗಳಲ್ಲಿ ಭರತನಾಟ್ಯದ ಚಿತ್ರಣ ನೋಡಲು ಸಿಗುತ್ತದೆ.
ಯಲ್ಲಾಪುರ: ಭರತನಾಟ್ಯ ಭಾರತೀಯ ಸಾಂಸ್ಕೃತಿಕ ಕಲೆಗಳ ಅವಿಭಾಜ್ಯ ಅಂಗವಾಗಿದ್ದು, ೬೪ ಲಲಿತ ಕಲೆಗಳಲ್ಲೊಂದಾದ ಭರತನಾಟ್ಯ ಭಗವಂತನ ಆರಾಧನೆ ಮಾಡುವ ಮಾಧ್ಯಮ ಎಂದು ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ತಿಳಿಸಿದರು.ಜ. ೧೪ರಂದು ಪಟ್ಟಣದ ಅಡಿಕೆ ಭವನದಲ್ಲಿ ಭಾರತಿ ನೃತ್ಯ ಕಲಾ ಕೇಂದ್ರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ನಾಟ್ಯೋತ್ಸವ ಭರತನಾಟ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.ಪುರಾತನ ಶಿಲ್ಪಗಳಲ್ಲಿ ಭರತನಾಟ್ಯದ ಚಿತ್ರಣ ನೋಡಲು ಸಿಗುತ್ತದೆ. ಮುಖಾಭಿನಯ, ಮುದ್ರೆಗಳು, ಭಾವನೆಗಳು ಭರತನಾಟ್ಯದ ಪ್ರಮುಖ ಅಂಗಗಳು. ಸುಮಾ ತೊಂಡೆಕೆರೆ ಭರತನಾಟ್ಯದ ಮೂಲಕ ಸಂಸ್ಕಾರ ಬಿತ್ತುವ ಕಾರ್ಯಕ್ಕಾಗಿ ಜೀವನ ಮುಡಿಪಿಟ್ಟಿರುವುದು ಶ್ಲಾಘನೀಯ ಎಂದರು.ವಿಶ್ವದರ್ಶನ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಮಾತನಾಡಿ, ಉತ್ಸಾಹವನ್ನು ತುಂಬುವುದು ಉತ್ಸವ. ನಾಟ್ಯದ ಮೂಲಕ ಜೀವಂತಿಕೆಯನ್ನು ಮೂಡಿಸುವ ಕಾರ್ಯವನ್ನು ನಾಟ್ಯಾಂಜಲಿ ನೃತ್ಯಶಾಲೆ ನಾಟ್ಯೋತ್ಸವದ ಮೂಲಕ ಮಾಡುತ್ತಿದೆ ಎಂದರು.ಪತ್ರಕರ್ತ ನಾಗರಾಜ ಮದ್ಗುಣಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ ಮುಂಡಿಗೆ ಜಡ್ಡಿ ಮಾತನಾಡಿದರು. ಭಾರತಿ ನೃತ್ಯ ಕಲಾ ಕೇಂದ್ರದ ಸಂಚಾಲಕಿ ಸುಮಾ ತೊಂಡೆಕೆರೆ ವೇದಿಕೆಯಲ್ಲಿದ್ದರು. ಮಧು ಸಂಗಡಿಗರು ಪ್ರಾರ್ಥನೆ ಹಾಡಿದರು. ವಿ.ಟಿ. ಹೆಗಡೆ ತೊಂಡೆಕೆರೆ ಸ್ವಾಗತಿಸಿದರು. ಪರಮಾನಂದ ದುಂಡಿ ನಿರ್ವಹಿಸಿದರು. ಗೋದಾವರಿ ಹೆಗಡೆ ವಂದಿಸಿದರು.
ನಾಟ್ಯೋತ್ಸವದಲ್ಲಿ ಪುಷ್ಪಾಂಜಲಿ, ಅಲ್ಲಾರಿಪು, ಜತಿಸ್ವರ, ಗಣೇಶ ಸ್ತುತಿ, ಕೌತ್ವಂ, ಶಿವಸ್ತುತಿ, ದೇವರ ನಾಮಗಳು, ನೃತ್ಯ ರೂಪಕ, ತಿಲ್ಲಾನ ಹಾಗೂ ಜಾನಪದ ನೃತ್ಯಗಳು ಪ್ರದರ್ಶನಗೊಂಡವು. ನಟುವಾಂಗದಲ್ಲಿ ಸುಮಾ ತೊಂಡೆಕೆರೆ, ಹಾಡುಗಾರಿಕೆಯಲ್ಲಿ ವಾಣಿ ಉಡುಪಿ, ಮೃದಂಗದಲ್ಲಿ ಗೋಪಿಕೃಷ್ಣ, ವಯೋಲಿನ್‌ನಲ್ಲಿ ಪಂ. ಶಂಕರ ಕಬಾಡಿ, ರಿದಮ್ ಪ್ಯಾಡ್‌ನಲ್ಲಿ ರಾಮು ರಂಗದೋಳ ಕಾರ್ಯ ನಿರ್ವಹಿಸಿದರು.