ಶ್ರೀರಂಗಪಟ್ಟಣ: ಭಾರತೀಯ ಮಜ್ದೂರ್ ಸಂಘದ 72ನೇ ಸಂಸ್ಥಾಪನಾ ದಿನವನ್ನು ಸಂಘದ ಕಚೇರಿ ಆವರಣದಲ್ಲಿ ಆಚರಿಸಲಾಯಿತು. ಬಿಎಂಎಸ್ ಕಟ್ಟಡ ಕಾರ್ಮಿಕ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಎಸ್.ಎನ್.ವಾಸುದೇವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶಾದ್ಯಂತ ಬಿಎಂಎಸ್ ಕಟ್ಟಡ ಕಾರ್ಮಿಕ ಸಂಘಟನೆಯಲ್ಲಿ 2 ಕೋಟಿ, 20 ಲಕ್ಷಕ್ಕೂ ಹೆಚ್ಚು ಮಂದಿ ಸಂಘದಲ್ಲಿ ನೋಂದಾಯಿತ ಸದಸ್ಯರಿದ್ದಾರೆ. ಕಳೆದ 72 ವರ್ಷದಿಂದ ನಮ್ಮ ಸಂಘಟನೆಯಲ್ಲಿ ಯಾವುದೇ ಅವ್ಯವಹಾರಗಳಿಲ್ಲದೆ ಸದಸ್ಯರಿಗೆ ಯಾವುದೇ ತೊಂದರೆಯಿಲ್ಲದೆ ಇಲ್ಲಿಯವರೆಗೂ ನಡೆದು ಬಂದ ಹಳೆಯ ಸಂಘಟನೆಯಾಗಿದೆ ಎಂದರು.
ಒಬ್ಬ ಕಾರ್ಮಿಕನ ಜೀವನೋಪಾಯದ ಸೌಲಭ್ಯ ಪಡೆದುಕೊಳ್ಳಲು ಹೋರಾಟಗಳ ಮೂಲಕ ಸಂಘಟಿಸಿದ ದೇಶದಲ್ಲಿ ಉತ್ತಮ ಕಾರ್ಮಿಕ ಸಂಘಟನೆಯಾಗಿ ಬೆಳೆದು ಬಂದಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕ ಕುಟುಂಬಸ್ಥರಿಗೂ ಸೌಲಭ್ಯಗಳು ದೊರಕಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ (ಎಪಿಪಿ) ಭರತ್ ಭೀಮಯ್ಯ ಕೆ.ಸಿ, ಮೈಸೂರು ವಿಭಾಗದ ಅಧ್ಯಕ್ಷ ಎಚ್.ಎನ್.ಆರಾಧ್ಯ ಸೇರಿ ಇತರೆ ಗಣ್ಯರು ಕಾರ್ಗಿಲ್ ಯುದ್ಧದ ನೆನಪಿನಾರ್ಥ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಯೋಧರು ಸೇರಿದಂತೆ ಮೈಸೂರು ಜಿಲ್ಲೆಯ ಬಿಎಂಎಸ್‌ನ ಮಾಜಿ ಅಧ್ಯಕ್ಷ ಸತ್ಯನಾರಾಯಣ ಕದಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಂಡ್ಯ ಜಿಲ್ಲಾ ಅಧ್ಯಕ್ಷ ಆರ್.ಕೆಂಚೇಗೌಡ, ಜಿಲ್ಲಾ ಕಾರ್ಯದರ್ಶಿ ರಾಜು ಎಸ್. ಅಲ್ಲಾಪಟ್ಟಣ, ಸಂಘದ ಉಪಾಧ್ಯಕ್ಷ ಪ್ರಕಾಶ್, ಹಾಗೂ ವೆಂಕಟಪ್ಪ ಸೇರಿದಂತೆ ಇತರರು ಇದ್ದರು.