ಸಾರಾಂಶ
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ ರಾಮಮಂದಿರದಲ್ಲಿ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಭಟ್ಕಳ ಕೇಸರಿಮಯವಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಭಟ್ಕಳ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ ರಾಮಮಂದಿರದಲ್ಲಿ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಭಟ್ಕಳದಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದ್ದು, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶ ಕೇಸರಿಮಯಗೊಂಡಿದೆ.
ಭಟ್ಕಳದ ಹೃದಯಭಾಗವಾದ ವೃತ್ತದಲ್ಲಂತೂ ಹಿಂದೂ ಸಂಘಟನೆಯ ಕಾರ್ಯಕರ್ತರು ಗೋಪುರಕ್ಕೆ ಕೇಸರಿ ಪತಾಕೆ ಜತೆ ಬಾವುಟ ಹಾಗೂ ಜಯ ಶ್ರೀರಾಮ ಎಂದು ವಿದ್ಯುತ್ ದೀಪದಿಂದ ಬರೆಯಿಸಿ ಅದು ರಾತ್ರಿ ಇಡೀ ಝಗಮಗಗೊಳಿಸುಂತೆ ಮಾಡಿದ್ದಾರೆ. ಜತೆಗೆ ಗೋಪುರದ ನಾಲ್ಕೂ ಕಡೆ ಶ್ರೀರಾಮ ಭಾವಚಿತ್ರ ಹಾಕಲಾಗಿದೆ. ಭಟ್ಕಳ ವೃತ್ತ ಸಂಪೂರ್ಣ ಕೇಸರಿಮಯಗೊಂಡು ರಾತ್ರಿ ವಿದ್ಯುತ್ ದೀಪದ ಅಲಂಕಾರದಿಂದ ಆಕರ್ಷಕವಾಗಿ ಕಾಣುತ್ತಿದೆ. ಶ್ರೀರಾಮ ಮಂದಿರದ ಉದ್ಘಾಟನೆ ಅಯೋಧ್ಯೆಯಲ್ಲಿ ನಡೆಯುತ್ತಿದ್ದರೂ ಇದು ಭಟ್ಕಳದಲ್ಲೇ ನಡೆಯುತ್ತಿದೆ ಎಂಬ ಭಕ್ತಿ ಭಾವನೆಯಿಂದ ಹಿಂದೂ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಪಟ್ಟಣದ ಇನ್ನಿತರ ಭಾಗ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲಿಯೂ ಶ್ರೀರಾಮನ ಉದ್ಘಾಟನೆ ದೊಡ್ಡ ದೊಡ್ಡ ಕಟೌಟ್‌ಗಳು, ಬಂಟಿಂಗ್ಸ್ ಹಾಕಿ ಶೃಂಗಾರ ಮಾಡಲಾಗಿದೆ. ಎಲ್ಲೆಡೆ ಶ್ರೀರಾಮ ಮಂದಿರ ಉದ್ಘಾಟನೆಯ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಸೋಮವಾರ ಉದ್ಘಾಟನೆಯ ಕ್ಷಣಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ದೀಪೋತ್ಸವ, ಅನ್ನದಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಕುದ್ರೆಬೀರಪ್ಪ ಹಾಗೂ ಶ್ರೀ ಹನುಮಂತ ದೇವಸ್ಥಾನದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ ಜ. ೧೮ರಂದೇ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಜ. ೨೨ರ ತನಕ ನಡೆಯುತ್ತಿರುವುದು ಅತ್ಯಂತ ವಿಶೇಷವಾಗಿದೆ. ಮುರ್ಡೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ರಾಮ ತಾರಕ ಹೋಮ, ರಾತ್ರಿ 8 ಗಂಟೆಯಿಂದ ರಾಮೋತ್ಸವ, ಸುಂದರ ರಾಮೇಶ್ವರ ದೇವಸ್ಥಾನದಿಂದ ಓಲಗ ಮಂಟಪದ ವರೆಗೆ ಬೃಹತ್ ಮೆರವಣಿಗೆ, ದೀಪೋತ್ಸವ, ರಾಮ ಪೂಜೆ ನಡೆಯಲಿದೆ. ಮಾರುಕೇರಿ ಹೂತ್ಕಳದ ಶ್ರೀ ಧನ್ವಂತರಿ ದೇವಸ್ಥಾನದಲ್ಲಿ ರಾಮತಾರಕ ಯಜ್ಞ, ವಿಶೇಷ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಣಣೆ ಏರ್ಪಡಿಸಲಾಗಿದೆ. ಕಾಸ್ಮುಡಿ ಹನುಮಂತ ದೇವಸ್ಥಾನದಲ್ಲಿ ರಾಮ ರಕ್ಷಾ ಸ್ತೋತ್ರದ ಕಂಠಪಾಠ ಸ್ಪರ್ಧೆ, 12 ಗಂಟೆಗೆ ಧಾರ್ಮಿಕ ಸಭೆ, ಮಹಾಪೂಜೆ, ಸಂಜೆ ದೀಪಾರಾಧನೆ, ಭಜನೆ ನಡೆಯಲಿದೆ. ಕರಿಕ್ ಶ್ರೀರಾಮ ಮಂದಿರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಭಜನೆ, ಶ್ರೀರಾಮ ದೇವರಿಗೆ ವಿಶೇಷ ಪೂಜೆ, ಹೋಮ, ಹವನಗಳು, ಧಾರ್ಮಿಕ ಸಭೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಭಜನೆ. ದೀಪಾರಾಧನೆ ಮುಂತಾದವು ನಡೆಯಲಿದೆ. ಶ್ರೀರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ ತಾಲೂಕಿನ ಎಲ್ಲ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆ, ಹೋಮ ಹವನ ನಡೆಯಲಿದೆ. ಈಗಾಗಲೇ ಹಿಂದೂ ಶೃದ್ಧಾ ಭಕ್ತಿಯಿಂದ ಕಾರ್ಯಕರ್ತರು ಮನೆ ಮನೆಗೆ ಅಕ್ಷತೆಯೊಂದಿಗೆ ಶ್ರೀ ರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯದ ಆಮಂತ್ರಣ ಪತ್ರಿಕೆಯನ್ನು ತಲುಪಿಸಿದ್ದು ಅಂದು ಎಲ್ಲ ಮನೆ-ಮನಗಳಲ್ಲಿ ದೀಪ ಬೆಳಗಲಿದೆ. ರಾಮ ಮಂದಿರದ ಉದ್ಘಾಟನೆಯ ದಿನವಾದ ಸೋಮವಾರ ಎಲ್ಲರ ಮನೆಗಳಲ್ಲಿ ಸಂತೃಪ್ತಿಯ ಭಾವದೊಂದಿಗೆ ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಭಾನುವಾರ ಸಂಜೆಯೂ ಕೆಲವು ದೇವಸ್ಥಾನಗಳಲ್ಲಿ ಭಜನೆ ನಡೆಯಿತು.