ಸಾರಾಂಶ
ಕನ್ನಡಪ್ರಭ ವಾರ್ತೆ ಭಟ್ಕಳ
ಇಲ್ಲಿಯ ಪ್ರತಿಷ್ಠಿತ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ೬೧ನೇ ವರ್ಷದ ೨೦೨೪-೨೫ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯು ನಗರದ ಕಮಲಾವತಿ ರಾಮನಾಥ ಶ್ಯಾನಭಾಗ ಸಭಾ ಭವನದಲ್ಲಿ ಬ್ಯಾಂಕಿನ ಅಧ್ಯಕ್ಷೆ ಮೆಹಬೂಬಿ ಪಟೇಲ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿದ ಅಧ್ಯಕ್ಷೆ ಮೆಹಬೂಬಿ ಪಟೇಲ್ ವರದಿಯ ವರ್ಷದಲ್ಲಿ ಬ್ಯಾಂಕಿನ ಶೇರುದಾರರ ಸಂಖ್ಯೆ ೨೬೬೧೧ ಇದ್ದು, ಶೇರು ಬಂಡವಾಳ ₹೧೨.೮೫ ಕೋಟಿ ಇದೆ. ಕಾಯ್ದಿಟ್ಟ ನಿಧಿ ಹಾಗೂ ಇತರೇ ನಿಧಿಗಳು ₹ ೭೦ ಕೋಟ ೪೦ ಲಕ್ಷದಿಂದ ₹೭೭ ಕೋಟಿ ೫೫ ಲಕ್ಷಕ್ಕೆ ಏರಿಕೆಯಾಗಿದೆ. ಒಟ್ಟು ಠೇವಣಿ ಸಂಗ್ರಹಣೆ ₹೩೫೪.೫೩ ಕೋಟಿ ಆಗಿದೆ. ಬ್ಯಾಂಕಿನ ಹೂಡಿಕೆಯು ₹೨೨೧.೪೪ ಕೋಟಿಯಾಗಿದೆ. ವರದಿ ವರ್ಷದಲ್ಲಿ ಬ್ಯಾಂಕಿನ ಒಟ್ಟೂ ಸಾಲ ನೀಡಿಕೆಯು ₹೧೮೧.೯೪ ಕೋಟಿಯಾಗಿದ್ದು ಆದ್ಯತಾ ರಂಗಕ್ಕೆ ₹೧೩೬.೯೭ ಕೋಟಿ ಸಾಲ ನೀಡಿದ್ದು ಅದರಲ್ಲಿ ದುರ್ಬಲ ವರ್ಗಕ್ಕೆ ₹೨೯.೫೭ ಕೋಟಿ ಸಾಲ ನೀಡಲಾಗಿದೆ. ಬ್ಯಾಂಕು ಕಳೆದ ಮಾರ್ಚ ಅಂತ್ಯಕ್ಕೆ ₹85 ಲಕ್ಷ ರೂಪಾಯಿ ನಿರ್ವಹಣಾ ಲಾಭ ಹೊಂದಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ತುಳಸಿದಾಸ ಮೊಗೇರ ಹಾಗೂ ನಿರ್ದೇಶಕ ಎಂ.ಎಂ. ಲೀಮಾ ೨೦೨೫, ಮಾ.೩೧ಕ್ಕೆ ಅಂತ್ಯಗೊಂಡ ವರ್ಷದ ಕ್ರಮವಾಗಿ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ವರದಿ ಮಂಡಿಸಿದರು.ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರಶಾಂತ ಮುರ್ಡೇಶ್ವರ ಬ್ಯಾಂಕಿನ ನಡಾವಳಿಯನ್ನು ಓದಿ ಸದಸ್ಯರ ಒಪ್ಪಿಗೆ ಪಡೆದರು. ಶೇರುದಾರ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಶೇರುದಾರರು ಬ್ಯಾಂಕಿನ ಮತ್ತು ನಿರ್ದೇಶಕರ ವಿರುದ್ಧ ಅಪಪ್ರಚಾರ ಮಾಡಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಮತ್ತು ಪ್ರಧಾನ ವ್ಯವಸ್ಥಾಪಕರಿಗೆ ಒತ್ತಾಯಿಸಿದರು. ಬ್ಯಾಂಕಿನ ನಿರ್ದೇಶಕರಾದ ಅಬ್ದುಲ್ ಖಾಲೀಕ್ ಸೌದಾಗರ್, ಶ್ರೀಧರ ನಾಯ್ಕ, ಸಂತೋಷ ಗೊಂಡ, ಪದ್ಮನಾಭ ಪೈ, ಶ್ರೀಕಾಂತ ನಾಯ್ಕ, ಸುರೇಶ ಪೂಜಾರಿ, ರಮೇಶ ನಾಯ್ಕ, ರಾಮ ನಾಯ್ಕ, ವಸಂತ ದೇವಾಡಿಗ, ಗಣಪತಿ ಮೊಗೇರ, ಮಹ್ಮದ್ ಅಯೂಬ್ ಹಮ್ಜಾ ಓಟ್ಟುಪುರ, ಬೀನಾ ವೈದ್ಯ, ವೃತ್ತಿಪರ ನಿರ್ದೇಶಕರುಗಳಾದ ವಿಕ್ಟರ್ ಗೋಮ್ಸ್, ಅಬ್ದುಲ್ ರವೂಫ್ ಖಾಜಿ ಹಾಗೂ ಬೋರ್ಡ ಆಫ್ ಮೆನೇಜ್‌ಮೆಂಟಿನ ಸದಸ್ಯರಾದ ಶಂಭು ಹೆಗಡೆ, ಎಸ್.ಎಂ. ಖಾನ್, ವೆಂಕಟೇಶ ಭಟ್ಕಳಕರ್ ಮುಂತಾದವರಿದ್ದರು.
ಪ್ರಧಾನ ವ್ಯವಸ್ಥಾಪಕ ಪ್ರಶಾಂತ ಮುರ್ಡೇಶ್ವರ ಸ್ವಾಗತಿಸಿದರು. ಹಿರಿಯ ವ್ಯವಸ್ಥಾಪಕ ಪಾಂಡುರಂಗ ಸಾನು ಹಿಂದಿನ ವರ್ಷದ ನಡಾವಳಿ ಓದಿ ಹೇಳಿದರು. ನಿರ್ದೇಶಕ ಶ್ರೀಧರ ನಾಯ್ಕ ವಂದಿಸಿದರು.