ಸಾರಾಂಶ
ಶಿರಾಲಿಯ ಸಾಹಿತಿ ನಾರಾಯಣ ಯಾಜಿ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.
ಭಟ್ಕಳ: ಶಿರಾಲಿಯ ಅಳ್ವೆಕೋಡಿ ದುರ್ಗಾಪಮೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ಜ. 7ರಂದು ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇದರ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದು ತಾಲೂಕು ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಶಿರಾಲಿಯ ಸಾಹಿತಿ ನಾರಾಯಣ ಯಾಜಿ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಆ ದಿನ ಬೆಳಗ್ಗೆ ೮ ಗಂಟೆಗೆ ರಾಷ್ಟ್ರಧ್ವಜಾರೋಹಣವನ್ನು ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ನಾಡ ಧ್ವಜಾರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ನೆರವೇರಿಸಲಿದ್ದಾರೆ. ನಂತರ ಅಳ್ವೆಕೋಡಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಹಾಯಕ ಆಯುಕ್ತೆ ಡಾ. ನಯನಾ ಎಸ್. ಚಾಲನೆ ನೀಡಲಿದ್ದಾರೆ.ಸಮ್ಮೇಳನದ ಉದ್ಘಾಟನೆಯನ್ನು ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡಲಿದ್ದಾರೆಂದರು. ಸಮ್ಮೇಳನದಲ್ಲಿ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಾನಾಸುತ ಶಂಭು ಹೆಗಡೆ ಧ್ವಜ ಹಸ್ತಾಂತರಿಸಲಿದ್ದಾರೆ.
ಅಂದು ಮಧ್ಯಾಹ್ನ ೨ ಗಂಟೆಗೆ ವಿಚಾರ ಗೋಷ್ಠಿ, ೩ ಗಂಟೆಯಿಂದ ಕವಿಗೋಷ್ಠಿ, ೪ ಗಂಟೆಗೆ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ, ಸಂಜೆ ೫ ಗಂಟೆಗೆ ಸಮಾರೋಪ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಿಂದ ಡಿ.ಎಂ. ಮೊಗೇರ, ವಿ.ಡಿ. ಮೊಗೇರ, ಸಹಕಾರಿ ಕ್ಷೇತ್ರದಿಂದ ಈರಪ್ಪ ಗರ್ಡೀಕರ್, ಅಶೋಕ ಪೈ, ಸಮಾಜ ಸೇವೆಗಾಗಿ ರಮೇಶ ಶೆಟ್ಟಿ, ಇಸ್ಮಾಯಿಲ್ ಸವುದ್ ಗವಾಯಿ, ಜನಪದ ಕ್ಷೇತ್ರದಿಂದ ಈರಯ್ಯ ಮೊಗೇರ, ಶಿಕ್ಷಣ ಕ್ಷೇತ್ರದಿಂದ ಅರ್ಚನಾ ಯು., ಮಾಧ್ಯಮ ಕ್ಷೇತ್ರದಿಂದ ವಿವೇಕ ಮಹಾಲೆ, ಸುಬ್ರಹ್ಮಣ್ಯ ಭಟ್ಟ ದಾಸನಕುಡಿಗೆ, ಮನಮೋಹನ ನಾಯ್ಕ, ವೈದ್ಯಕೀಯ ಕ್ಷೇತ್ರದಿಂದ ಡಾ. ಲಕ್ಷ್ಮೀಶ ನಾಯ್ಕ, ಪೌರಕಾರ್ಮಿಕ ಗಜೇಂದ್ರ ಶಂಕರ ಶಿರಾಲಿ ಸನ್ಮಾನಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಕಸಾಪ ಪದಾಧಿಕಾರಿಗಳಾದ ಶ್ರೀಧರ ಶೇಟ್, ನಾರಾಯಣ ನಾಯ್ಕ ಮುಂತಾದವರಿದ್ದರು. ಅಯ್ಯಪ್ಪ ಸ್ವಾಮಿ ಪಲ್ಲಕ್ಕಿ ಉತ್ಸವ ಸಂಪನ್ನ
ಭಟ್ಕಳ: ಪಟ್ಟಣದ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ಅಯಪ್ಪ ಸ್ವಾಮಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ಸಂಪನ್ನಗೊಂಡಿತು.ಪುನರ್ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಮಾರುತಿ ಗುರುಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಕಲಾವೃದ್ಧಿ ಹೋಮ, ಕಲಶಾಭಿಷೇಕ ನಡೆಸಲಾಯಿತು. ಬಳಿಕ ಮಹಾಪೂಜೆ ನೆರವೇರಿಸಿ ಪ್ರಸಾದ ವಿತರಣೆ ಮಾಡಲಾಯಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.ಸಂಜೆ ನಡೆದ ಅಯ್ಯಪ್ಪ ಸ್ವಾಮೀಯ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಚಂಡೆ ವಾದನ, ವೇಷಧಾರಿಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಪಲ್ಲಕ್ಕಿ ಸಾಗಿದ ಕಡೆಯಲೆಲ್ಲ ಭಕ್ತರು ಅಯ್ಯಪ್ಪ ಸ್ವಾಮಿಗೆ ಹಣ್ಣುಕಾಯಿ ಅರ್ಪಿಸಿದರು. ತೆಂಗಿನಗುಂಡಿಯ ಮಂಜಪ್ಪ ಗುರುಸ್ವಾಮಿ, ಮಧುಸ್ವಾಮಿ ಸೇರಿದಂತೆ ಅಯ್ಯಪ್ಪ ಮಾಲಾಧಾರಿಗಳು ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.