ಹೊಳೆನರಸೀಪುರದ ಭವಾನಿ ರೇವಣ್ಣ ವಿಚಾರಣೆಗೆ ಮನೆಗೇ ಬಂದ ಎಸ್‌ಐಟಿ

| Published : Jun 02 2024, 01:45 AM IST / Updated: Jun 02 2024, 07:36 AM IST

ಹೊಳೆನರಸೀಪುರದ ಭವಾನಿ ರೇವಣ್ಣ ವಿಚಾರಣೆಗೆ ಮನೆಗೇ ಬಂದ ಎಸ್‌ಐಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದಲ್ಲಿ ಇರುವ ಶಾಸಕ ಎಚ್.ಡಿ.ರೇವಣ್ಣ ಮನೆಗೆ ಶನಿವಾರ ಭವಾನಿ ರೇವಣ್ಣನವರ ವಿಚಾರಣೆಗಾಗಿ ಎಸ್‌ಐಟಿ ಅಧಿಕಾರಿಗಳು ಆಗಮಿಸಿದ್ದು, ಭವಾನಿ ರೇವಣ್ಣ ಮನೆಯಲ್ಲಿ ಇಲ್ಲವಾದ್ದರಿಂದ ಎಸ್‌ಐಟಿ ಅಧಿಕಾರಿಗಳು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

  ಹೊಳೆನರಸೀಪುರ :  ಪಟ್ಟಣದಲ್ಲಿ ಇರುವ ಶಾಸಕ ಎಚ್.ಡಿ.ರೇವಣ್ಣ ಮನೆಗೆ ಶನಿವಾರ ಭವಾನಿ ರೇವಣ್ಣನವರ ವಿಚಾರಣೆಗಾಗಿ ಎಸ್‌ಐಟಿ ಅಧಿಕಾರಿಗಳು ಆಗಮಿಸಿದ್ದು, ಭವಾನಿ ರೇವಣ್ಣ ಮನೆಯಲ್ಲಿ ಇಲ್ಲವಾದ್ದರಿಂದ ಎಸ್‌ಐಟಿ ಅಧಿಕಾರಿಗಳು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಆದರೆ ಅವರ ಮುಂದಿನ ನಡೆ ನಿಗೂಢವಾಗಿದೆ.

ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪೆನ್‌ಡ್ರೈವ್ ಸಂತ್ರಸ್ತೆ ಮಹಿಳೆಯೊಬ್ಬರ ಪುತ್ರ ತನ್ನ ತಾಯಿಯ ಅಪಹರಣವಾಗಿದೆ, ಹುಡುಕಿ ಕೊಡಿ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರಿಗೆ ಶನಿವಾರ ವಿಚಾರಣೆಗೆ, ‘ನಿಮ್ಮ ಮನೆಗೆ ಆಗಮಿಸುತ್ತೇವೆ’ ಎಂದು ನೋಟಿಸ್ ನೀಡಿದ್ದರು.

ಇದರ ಹಿನ್ನಲೆಯಲ್ಲಿ ಎಸ್‌ಐಟಿ ಇನ್‌ಸ್ಪೆಪೆಕ್ಟರ್ ಶ್ರೀಧರ್ ನೇತೃತ್ವದಲ್ಲಿ ಮಹಿಳಾ ಅಧಿಕಾರಿ ಜತೆ ಎರಡು ವಾಹನಗಳಲ್ಲಿ ಆಗಮಿಸಿದರು. ಆದರೆ ಭವಾನಿ ರೇವಣ್ಣ ಮನೆಯಲ್ಲಿ ಇಲ್ಲವಾದ್ದರಿಂದ ಎಸ್‌ಐಟಿ ಅಧಿಕಾರಿಗಳು ಅನಿವಾರ್ಯವಾಗಿ ಸಂಜೆ ಐದು ಗಂಟೆಯ ತನಕ ನೋಡಿ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹಿಳೆ ಅಪಹರಣ ಪ್ರಕರಣ ಸಂಬಂಧ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಂತರ ಶುಕ್ರವಾರ ಮೇ ೩೧ಕ್ಕೆ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಧೀಶರು, ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಬಂಧನದ ಭೀತಿಯಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 

ಎಸ್‌ಐಟಿಯಿಂದ ಶಾಸಕ ಎ.ಮಂಜು ವಿಚಾರಣೆ

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳುಳ್ಳ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಅರಕಲಗೂಡು ಶಾಸಕ ಎ.ಮಂಜು ಹೆಸರು ಕೇಳಿ ಬಂದ ಬೆನ್ನಲ್ಲೇ ಶನಿವಾರ ಎ.ಮಂಜು ಎಸ್‌ಐಟಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದೇ ಬಿಂಬಿತವಾಗಿರುವ ನವೀನ್‌ ಗೌಡ ಅವರನ್ನು ಈಗಾಗಲೇ ಎಸ್‌ಐಟಿ ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ನವೀನ್‌ ಗೌಡ ತಾನು ಪೆನ್‌ಡ್ರೈವ್‌ ಅನ್ನು ಅರಕಲಗೂಡಿನ ಶಾಸಕ ಎ.ಮಂಜು ಅವರಿಗೆ ಏ.23 ರಂದು ಅರಕಲಗೂಡಿನಲ್ಲಿ ಭೇಟಿ ಮಾಡಿ ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಆ ನಿಟ್ಟಿನಲ್ಲಿ ಎಸ್‌ಐಟಿ ಎ.ಮಂಜು ಅವರಿಗೆ ವಿಚಾರಣೆಗೆ ಕರೆಸಿದ್ದರು.ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ತಮ್ಮಯ್ಯ ಅವರಿಂದ ವಿಚಾರಣೆ ನಡೆಸಲಾಯಿತು.