ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 587 ಅಂಕ ಪಡೆದು ತಾಲೂಕಿಗೆ ಮೊದಲ ಸ್ಥಾನ ಪಡೆದ ಸ್ಕಾಲರ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಬೊಮ್ಮೇನಹಳ್ಳಿಯ ಬಿ.ಎಂ.ಭವಾನಿಗೌಡರನ್ನು ಗ್ರಾಮಸ್ಥರು ಅಭಿನಂದಿಸಿದರು.

ಮಾಜಿ ಶಾಸಕ ಬೊಮ್ಮೇನಹಳ್ಳಿಯ ಬಿ.ಪ್ರಕಾಶ್ ನೇತೃತ್ವದಲ್ಲಿ ವಿದ್ಯಾರ್ಥಿನಿ ಭವಾನಿಗೌಡರ ಮನೆಗೆ ಆಗಮಿಸಿದ ಗ್ರಾಮದ ಮುಖಂಡರು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.

ಈ ವೇ‍ಳೆ ಮಾತನಾಡಿದ ಮಾಜಿ ಶಾಸಕರು, ನಮ್ಮೂರಿನ ಸಾಮಾನ್ಯ ರೈತ ಕುಟುಂಬಕ್ಕೆ ಸೇರಿದ ಮಹದೇವ್ ಮತ್ತು ಕನ್ಯಾ ದಂಪತಿ ಪುತ್ರಿ ಭವಾನಿ ಸತತ ಪರಿಶ್ರಮದ ಓದಿನಿಂದ ಅತಿ ಹೆಚ್ಚು ಅಂಕಪಡೆದು ತಾಲೂಕಿನ ಕೀರ್ತಿ ಮತ್ತು ನಮ್ಮ ಗ್ರಾಮದ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾರೆ ಎಂದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಇವರ ಸಾಧನೆ ಸದಾ ಅನುಕರಣೀಯ. ಸೂಕ್ತ ಕಲಿಕಾ ಸೌಲಭ್ಯಗಳ ಕೊರತೆಯ ನಡುವೆಯೂ ನಮ್ಮೂರಿನ ಮಗಳು ಗಮನ ಸೆಳೆಯುವ ಸಾಧನೆ ಮಾಡಿದ್ದಾಳೆ. ಸಿಇಟಿ ಪರೀಕ್ಷೆಯಲ್ಲಿಯೂ ಈಕೆ ಯಶಸ್ಸುಗಳಿಸಿ ಮುಂದಿನ ದಿನಗಳಲ್ಲಿ ವೈದ್ಯಳಾಗುವ ಮೂಲಕ ಗ್ರಾಮೀಣ ಬಡ ಜನರ ಸೇವೆ ಮಾಡಲಿ ಎಂದು ಹಾರೈಸಿದರು.


ದೂರದ ಜಮೈಕಾದಲ್ಲಿ ವೈದ್ಯರಾಗಿ ಹುಟ್ಟೂರಿಗೆ ಆಗಮಿಸಿದ್ದ ಬೊಮ್ಮೇನಹಳ್ಳಿಯ ಡಾ.ಬಿ.ಬಸವರಾಜು ವಿದ್ಯಾರ್ಥಿನಿ ಭವಾನಿ ಅವರನ್ನು ಅಭಿನಂದಿಸಿ ಸಿಇಟಿ ಪರೀಕ್ಷೆಯ ಅನಂತರ ಭವಾನಿ ಅವರ ಮುಂದಿನ ಅಧ್ಯಯನಕ್ಕೆ ಅಗತ್ಯ ಧನ ಸಹಾಯ ಮಾಡುವುದಾಗಿ ತಿಳಿಸಿದರು.

ಇದೇ ವೇಳೆ ಗ್ರಾಮದ ಮುತ್ತುರಾಯಸ್ವಾಮಿ ದೇವಾಲಯದ ಅಭಿವೃದ್ಧಿಗೆ ವೈಯಕ್ತಿಕವಾಗಿ ಒಂದು ಲಕ್ಷ ರು. ಆರ್ಥಿಕ ನೆರವನ್ನು ದೇವಾಲಯ ಸಮಿತಿಯ ಸದಸ್ಯರಿಗೆ ಅರ್ಪಿಸಿದರು. ಮುಖಂಡರಾದ ಬೋರೇಗೌಡ, ರಾಮಕೃಷ್ಣೇಗೌಡ, ಗ್ರಾಪಂ ಮಾಜಿ ಸದಸ್ಯರಾದ ಲತಾ, ನಾಗೇಶ್, ಮಡುವಿನಕೋಡಿ ಉಮೇಶ್ ಮತ್ತಿತರರಿದ್ದರು.