ತಾಲೂಕಿನ ಮಳಲಗಾಂವ್ ಗ್ರಾಮದಲ್ಲಿ ರೈತ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಗೆ ಶಾಸಕ ಭೀಮಣ್ಣ ನಾಯ್ಕ ಶನಿವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿರಸಿ

ತಾಲೂಕಿನ ಮಳಲಗಾಂವ್ ಗ್ರಾಮದಲ್ಲಿ ರೈತ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಗೆ ಶಾಸಕ ಭೀಮಣ್ಣ ನಾಯ್ಕ ಶನಿವಾರ ಚಾಲನೆ ನೀಡಿದರು.

ಸ್ಪರ್ಧಾ ಕಣಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಶಾಸಕರು ಕ್ರೀಡೆಯನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿ, ಹೋರಿ ಬೆದರಿಸುವ ಸ್ಪರ್ಧೆಯು ನಮ್ಮ ಮಲೆನಾಡು ಮತ್ತು ಕರಾವಳಿ ಭಾಗದ ರೈತಾಪಿ ವರ್ಗದ ಸಾಂಪ್ರದಾಯಿಕ ಕ್ರೀಡೆಯಾಗಿದೆ. ಇಂತಹ ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯನ್ನು ಉಳಿಸುವುದಲ್ಲದೆ, ಯುವಜನತೆಯಲ್ಲಿ ಸಂಘಟನಾ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಹರ್ಷ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ನಾಯಕ ಅಶ್ವಿನ್ ಭೀಮಣ್ಣ ನಾಯ್ಕ, ಸ್ಪರ್ಧೆಯ ಪ್ರಮುಖ ಸಂಘಟಕರಾದ ಸುನಿಲ್ ನಾಯ್ಕ, ಅನಿಲ್ ನಾಯ್ಕ, ಪ್ರಶಾಂತ ಗೌಡ, ಉಮೇಶ ಗೌಡ, ನಾಗೇಂದ್ರ ಮಡಿವಾಳ, ಶಶಿಕುಮಾರ ಉಮ್ಮಾಡಿ, ನಾಗರಾಜ ನಾಯ್ಕ ಹಾಗೂ ಶಶಿಕುಮಾರ ಮರಿಗುಂಡಿ ಸೇರಿ ಪ್ರಮುಖರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ನೂರಾರು ಹಸಿರು ಮತ್ತು ಸಿಂಗರಿಸಿದ ಹೋರಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಸಾವಿರಾರು ಕ್ರೀಡಾಭಿಮಾನಿಗಳು ಮಳಲಗಾಂವ್‌ಗೆ ಆಗಮಿಸಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಶಿರಸಿಯಲ್ಲಿ ಸಿಎನ್‌ಜಿ ಬದಲು ಸಿಬಿಜಿ ಅನಿಲ ಇಂಧನ, ಆಕ್ಷೇಪ:

ವಾಹನಗಳಿಗೆ ಇದುವರೆಗೂ ಪೂರೈಸುತ್ತಿದ್ದ ಸಿಎನ್‌ಜಿ ಅನಿಲ ಇಂಧನದ ಬದಲು ಸಿಬಿಜಿ ಅನಿಲ ಇಂಧನ ಹಾಕುತ್ತಿರುವ ಬಗ್ಗೆ ಆಟೋ ಚಾಲಕರು ಹಾಗೂ ವಿವಿಧ ವಾಹನ ಮಾಲೀಕರು ಶನಿವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿಯ ಅಂಚೆ ವೃತ್ತದ ಬಳಿ ಸೇರಿದ 50ಕ್ಕೂ ಅಧಿಕ ವಾಹನ ಮಾಲೀಕರು, ನಮ್ಮ ವಾಹನವನ್ನು ಸಿಎನ್‌ಜಿ ಇಂಧನ ವಾಹನ ಎಂದು ನೋಂದಣಿ ಆಗಿದ್ದಲ್ಲದೇ, ಇದುವರೆಗೂ ಇದೇ ಇಂಧನ ಬಳಸಿ ವಾಹನ ಓಡಿಸುತ್ತಿದ್ದೇವೆ, ಆದರೆ ಕಳೆದ ಕೆಲವು ದಿನಗಳಿಂದ ಇಂಧನ ಪೂರೈಕೆಯ ಬಂಕ್‌ಗಳಲ್ಲಿ ಸಿಎನ್‌ಜಿ ಬದಲು ಸಿಬಿಜಿ ಇಂಧನ ಹಾಕಲಾಗುತ್ತಿದೆ. ಇದರಿಂದಾಗಿ ವಾಹನಗಳ ಕಾರ್ಯ ನಿರ್ವಹಣೆಯಲ್ಲಿ ಸಮಸ್ಯೆ ತಲೆದೋರುತ್ತಿದೆ. ಮಾರ್ಗ ಮಧ್ಯೆ ಕೆಟ್ಟು ನಿಂತ ಘಟನೆಗಳೂ ಜಾಸ್ತಿ ಆಗುತ್ತಿವೆ. ಈ ಕುರಿತಂತೆ ಪೂರೈಕೆದಾರರನ್ನು ವಿಚಾರಿಸಿದರೆ ನಮಗೂ ಈ ಬಗ್ಗೆ ತಿಳಿದಿಲ್ಲ ಎಂಬ ಉತ್ತರ ಬರುತ್ತಿದೆ. ನಮಗೆ ಸಿಎನ್‌ಜಿ ಇಂಧನವನ್ನೇ ಪೂರೈಸಬೇಕು ಎಂದು ತಹಸೀಲ್ದಾರ್ ಅವರಿಗೂ ಸಹ ಮನವಿ ನೀಡಿದ್ದೇವೆ. ಇನ್ನೂ ಸಿಬಿಜಿ ಇಂಧನ ಪೂರೈಕೆಯನ್ನೇ ಮುಂದುವರಿಸಿದರೆ ನಾವು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದರು.

ಪ್ರಮುಖರಾದ ರಾಘು ಗೌಳಿ, ಲೋಕೇಶ ಪಾವಸ್ಕರ್ ಮತ್ತಿತರರು ಇದ್ದರು.