ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಹಾರಾಷ್ಟ್ರದ ಉಜ್ಜನಿ ಮತ್ತು ವೀರ್ ಜಲಾಶಯದಿಂದ ಸೋಮವಾರ ಹಾಗೂ ಮಂಗಳವಾರ ಸತತ 2 ದಿನಗಳ ಕಾಲ ಭೀಮಾ ನದಿಗೆ ಹರಿಬಿಡಲಾದ ಸುಮಾರು 1.25 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ ನೀರು ಬುಧವಾರ ತಡರಾತ್ರಿ ಅಫಜಲ್ಪುರ ತಾಲೂಕಿನ ಮಣ್ಣೂರು ಮೂಲಕ ಸೊನ್ನ ಬ್ರಿಡ್ಜ್ ಮಾರ್ಗವಾಗಿ ಜಿಲ್ಲೆಯ ಭೀಮಾ ನದಿಗೆ ಪ್ರವೇಶಿಸಿದ ಕಾರಣ ಘತ್ತರಗಾ ಹಾಗೂ ಗಾಣಗಾಪೂರ ಸೇತುವೆಗಳು ಮುಳುಗಿವೆ.ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ ಮತ್ತು ಶುಕ್ರವಾರ ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಿಸಾಲಿಗೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಅಫಜಲ್ಪುರ ತಾಲೂಕಿನ ಘತ್ತರಗಾ- ಜೇರಟಗಿ ಮತ್ತು ಗಾಣಗಾಪುರ-ಇಟಗಾ ಸಂಪರ್ಕ ಕಲ್ಪಿಸುವ ಈ ಎರಡು ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ಠಿಕಾಣಿ ಹೂಡಿದ್ದು, ತಡರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದಂತೆ ಮುಂಜಾಗ್ರತೆಯ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಸಂಚಾರ ಬಂದ್ ಮಾಡಿದ್ದಾರೆ. ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಡಿ.ಸಿ. ಅವರು ಮನವಿ ಮಾಡಿದ್ದಾರೆ.ಇದಲ್ಲದೆ ನದಿ ನೀರಿನ ಮಟ್ಟ ಗುರುವಾರ ಬೆಳಗಿನವರೆಗೂ ಏರಿಕೆಯಲ್ಲಿತ್ತು, ಇದರಿಂದಾಗಿ ಕಬ್ಬು, ಬಾಳೆ, ತೊಗರಿ ಹೊಲಗದ್ದೆಗಳಲ್ಲಿ ಪ್ರವಾಹ ನೀರು ನುಗ್ಗಿದ್ದು ಭಾರಿ ಹಾನಿ ಸಂಭವಿಸಿದೆ.
ಏತನ್ಮಧ್ಯೆ ಮಹಾರಾಷ್ಟ್ರದಲ್ಲಿರುವ ಭೀಮಾ ನದಿ ಜಲಾನಯನ ಪ್ರದಶದಲ್ಲಿನ ಮಳೆ ತುಸು ತಗ್ಗಿದೆ. ಎಂದು ಗೊತ್ತಾಗಿದೆ. ಹೀಗಾಗಿ ಗುರುವಾರ ಬೆಳಗ್ಗೆ ಉಜನಿ ಜಲಾಶಯದಿಂದ ನದಿಗೆ 31, 600 ಕ್ಯುಸೆಕ್ ನೀರನ್ನು ಮಾತ್ರ ಹರಿಬಿಟ್ಟಿದ್ದಾರೆ. ಹೀಗಾಗಿ ಅಫಜಲ್ಪುರ ಸೇರಿದಂತೆ ಭೀಮಾನದಿ ಗುಂಟ ಉಂಟಾಗಿದ್ದ ಪ್ರವಾಹದಲ್ಲಿಯೂ ತುಸು ಇಳಿಕೆ ಗೋಚರಿಸಿದೆ.ಗ್ರಾಮಗಳಿಗೆ ಭೇಟಿ ನೀಡಲು ಡಿ.ಸಿ. ಸೂಚನೆ:
ಭೀಮಾ ನದಿಗೆ ತಡರಾತ್ರಿ ಅಪಾರ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಗ್ರಾಮಗಳಲ್ಕಿ ರಕ್ಷಣಾ ಕಾರ್ಯಚರಣೆ ಮತ್ತು ಕಾಳಜಿ ಕೇಂದ್ರ ತೆರೆಯಲು ಮೇಲುಸ್ತುವಾರಿಗೆ ನೇಮಿಸಿದ ಅಫಜಲ್ಪುರ, ಕಲಬುರಗಿ ಹಾಗೂ ಜೇವರ್ಗಿ ತಂಡದ ನೋಡಲ್ ಅಧಿಕಾರಿಗಳು ಎಚ್ಚರದಿಂದಿರಲು ಮತ್ತು ಕೂಡಲೆ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಡಿಸಿ ಫೌಜಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಅಲ್ಲದೆ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಚಾಯ್ತಿ ಇ.ಓ ಹಾಗೂ ಪೊಲೀಸ್ ಇಲಾಖೆಯು ನೋಡಲ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಸಾಧಿಸಿ ಪ್ರವಾಹದಿಂದ ಯಾವುದೇ ಜನ, ಜಾನುವಾರ ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಡಿ.ಸಿ. ಅವರು ತಿಳಿಸಿದ್ದಾರೆ.
ಪ್ರವಾಹ ಪೀಡಿತ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳ ನೇಮಕ:ಭೀಮಾ ನದಿಯಿಂದ ಪ್ರವಾಹಕ್ಕೆ ತುತ್ತಾಗುವ ಅಫಜಲ್ಪುರ, ಜೇವರ್ಗಿ, ಚಿತ್ತಾಪುರ ಹಾಗೂ ಶಹಾಬಾದ ತಾಲೂಕಿಗೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.
ನೋಡಲ್ ಅಧಿಕಾರಿಗಳು ತಾಲೂಕಿನ ಇತರೆ ಎಲ್ಲಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ ಕಾರ್ಯಚರಣೆ ಮತ್ತು ಕಾಳಜಿ ಕೇಂದ್ರಗಳ ಮೇಲುಸ್ತುವಾರಿ ವಹಿಸುವಂತೆ ಸೂಚಿಸಲಾಗಿದೆ.ಅಫಜಲ್ಪುರ ತಾಲೂಕಿಗೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್-8277931500, ಚಿತ್ತಾಪುರ ಮತ್ತು ಶಹಾಬಾದ ತಾಲೂಕಿಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ-9686075599 ಹಾಗೂ ಜೇವರ್ಗಿ ತಾಲೂಕಿಗೆ ತೋಟಗಾರಿಕೆ ಉಪನಿರ್ದೇಶಕ ಸಂತೋಷ ಕುಮಾರ-9448999235 ಇವರನ್ನು ನಿಯೋಜಿಸಲಾಗಿದೆ.