ಕ್ಷೇತ್ರದ ಅಭಿವೃದ್ಧಿಗೆ ಕೊಕ್ಕೆ ಹಾಕುತ್ತಿರುವ ಬೀಮಾ ನಾಯ್ಕರಿಗೆ ನನ್ನ ಕುರಿತು ಮಾತಾಡುವ ನೈತಿಕತೆ ಇಲ್ಲ

ಹಗರಿಬೊಮ್ಮನಹಳ್ಳಿ: ಮಾಜಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಅವರಿಂದಲೇ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ದುರ್ಬಳಕೆಯಾಗುತ್ತಿದೆ. ಪೊಲೀಸ್ ಇಲಾಖೆಯ ಆಯಕಟ್ಟಿನ ಸ್ಥಳಗಳಲ್ಲಿ ಭ್ರಷ್ಟ ಅಧಿಕಾರಿಗಳ ನೇಮಕ ಮಾಡುವ ಮೂಲಕ ಮಟಕಾ, ಐಪಿಎಲ್ ಬೆಟ್ಟಿಂಗ್‌ ಮತ್ತು ಕ್ಯಾಸಿನೋಗಳಂತಹ ಕಾಳ ದಂಧೆಕೋರರಿಗೆ ನೆರವಾಗಿದ್ದಾರೆ ಎಂದು ಶಾಸಕ ನೇಮರಾಜ್ ನಾಯ್ಕ ಆರೋಪಿಸಿದ್ದಾರೆ.

ತಾಲೂಕಿನ ಮಾಲವಿ ಗ್ರಾಮದ ಬಳಿ ಇರುವ ಹಗರಿಬೊಮ್ಮನಹಳ್ಳಿ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಕೆ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಕೊಕ್ಕೆ ಹಾಕುತ್ತಿರುವ ಬೀಮಾ ನಾಯ್ಕರಿಗೆ ನನ್ನ ಕುರಿತು ಮಾತಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಹ್ಯಾಬಿಟೇಟ್ ಸಂಸ್ಥೆ ಮೂಲಕ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳಲ್ಲಿ ₹೧೦೦ ಕೋಟಿ ಅನುದಾನ ಲೂಟಿಯಾಗಿದೆ ಎಂದು ಆರೋಪಿಸುತ್ತಿರುವ ಭೀಮಾನಾಯ್ಕ ಒಬ್ಬ ಮಾನಸಿಕ ಅಸ್ವಸ್ಥ. ಕೇವಲ ಮೂರು ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಂಡು ಸಹಿಸಲಾಗದೇ ನಾನು ಪರ್ಸೆಂಟೇಜ್ ವ್ಯವಹಾರ ನಡೆಸುತ್ತಿದ್ದೇನೆ ಎಂದು ಆರೋಪಿಸುವ ಬದಲು ಕಾಮಗಾರಿಗಳಲ್ಲಿ ಕಳಪೆ ಇದ್ದರೆ ತನಿಖೆ ನಡೆಸಲಿ. ಇವರದ್ದೇ ಸರ್ಕಾರ ಇದೆಯಲ್ಲ ಎಂದು ಕಾಲೆಳೆದರು.

ಹ್ಯಾಬಿಟೇಟ್ ಮೂಲಕ ನಡೆದಿರುವ ಕಾಮಗಾರಿಗಳ ಗುಣಮಟ್ಟ ಕುರಿತು ಕೆಕೆಆರ್‌ಡಿಬಿ ಕಾರ್ಯದರ್ಶಿಗಳೇ ಮೆಚ್ಚುಗೆ ಸೂಚಿಸಿದ್ದಾರೆ. ಯಾವುದೇ ತುಂಡು ಗುತ್ತಿಗೆ ಕಾಮಗಾರಿಗಳನ್ನು ನಮ್ಮ ಕಾರ್ಯಕರ್ತರು ನಿರ್ವಹಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಿಡಿಗಾಸೂ ಒದಗಿಸುತ್ತಿಲ್ಲ ಎಂದು ಪುನರುಚ್ಛರಿಸಿದ ಅವರು, ಕೇಂದ್ರದ ಅಮೃತ್ ಯೋಜನೆ, ಡಿಎಂಎಫ್ ಹಾಗೂ ಕೆಎಂಆರ್‌ಇಸಿ ಮೂಲಕ ಅನುದಾನ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಹಾಳಾಗಿರುವ ರಸ್ತೆಗಳ ಸಮೀಕ್ಷೆ ನಡೆಸಿ ಅಭಿವೃದ್ಧಿಗೆ ₹೪೯ಕೋಟಿ ಅನುದಾನ ಒದಗಿಸಲಾಗಿದೆ. ನವೆಂಬರ್‌ನಲ್ಲಿ ₹೪.೩೦ಕೋಟಿ ಅನುದಾನ ಒದಗಿಸಿ ಪ್ರಾರಂಭಿಸಿದ್ದ ಜಲಾಶಯದ ಕ್ರಸ್ಟ್‌ಗೇಟ್ ಕಾಮಗಾರಿ ಅಳವಡಿಕೆ ಮುಗಿದಿದೆ. ₹೨ ಕೋಟಿ ಅನುದಾನದಲ್ಲಿ ಜಲಾಶಯದ ಎಡ, ಬಲ ದಂಡೆಗಳನ್ನು ಸುಸ್ಥಿರಗೊಳಿಸಿ ೨ ಟಿಎಂಸಿ ನೀರನ್ನು ಸಂಗ್ರಹಿಸಿ ಮುಂದಿನ ಮಳೆಗಾಲದಲ್ಲಿ ರೈತರ ಜಮೀನುಗಳಿಗೆ ನೀರುಣಿಸಲಾಗುತ್ತದೆ ಎಂದು ವಿವರಿಸಿದರು.

ತಹಸೀಲ್ದಾರ್ ಕವಿತಾ, ನೀರಾವರಿ ಇಲಾಖೆಯ ಎಇಇ ಧರ್ಮರಾಜ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಜಿ.ಎಂ. ಜಗದೀಶ್, ಹೋಟೆಲ್ ಸಿದ್ಧರಾಜು, ಚಿತ್ತವಾಡಗಿ ಪ್ರಕಾಶ್, ನರೇಗಲ್ ಕೊಟ್ರೇಶ್, ನರೇಗಲ್ ಬಸವರಾಜ್, ಪುರಸಭಾ ಸದಸ್ಯರಾದ ದೀಪಕ್ ಕಠಾರೆ, ನಾಗರಾಜ ಜನ್ನು ಇದ್ದರು.