ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳ ಜೋಡಣೆ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಬಿಡುವುದು ಒಳ್ಳೆಯದು. ಸ್ವರ್ಣವಲ್ಲೀ ಶ್ರೀಗಳ ಮುಂದಿನ ಹೆಜ್ಜೆಗೆ ಸಂಪೂರ್ಣ ಬೆಂಬಲ ಸೂಚಿಸುವ ಜತೆ ಹೋರಾಟಕ್ಕೂ ಕೈಜೋಡಿಸುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಶಿರಸಿ: ಜಿಲ್ಲೆಯ ಜೀವನದಿಗಳ ಜೋಡಣೆ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಬಿಡುವುದು ಒಳ್ಳೆಯದು. ಸ್ವರ್ಣವಲ್ಲೀ ಶ್ರೀಗಳ ಮುಂದಿನ ಹೆಜ್ಜೆಗೆ ಸಂಪೂರ್ಣ ಬೆಂಬಲ ಸೂಚಿಸುವ ಜತೆ ಹೋರಾಟಕ್ಕೂ ಕೈಜೋಡಿಸುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇಡ್ತಿ ವರದಾ, ಅಘನಾಶಿನಿ-ವೇದಾವತಿ ಯೋಜನೆ ಮೂಲಕ ಜಿಲ್ಲೆಯ ಜನರ ಮೇಲೆ ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಪಕ್ಕದ ಹಾವೇರಿ ಜಿಲ್ಲೆಯ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿ ಈ ಜಿಲ್ಲೆಯ ಜನರ ಬಗ್ಗೆ ಯೋಚನೆ ಮಾಡಬೇಕು. ಅತಿಕ್ರಮಣದಾರರು ಇದ್ದಾರೆ. ಮಲೆನಾಡಿನಲ್ಲಿ ಮಳೆ ಸಾಕಷ್ಟು ಸುರಿದರೂ ಬೇಸಿಗೆಯಲ್ಲಿ ಕೆಲವು ಕಡೆಗಳಲ್ಲಿ ಕುಡಿಯುವ ನೀರು ಸಮಸ್ಯೆ ತಲೆದೋರುತ್ತದೆ. ನದಿ ತಿರುವು ಯೋಜನೆ ವಿರೋಧಿಸಿ ನನ್ನನ್ನು ಒಳಗೊಂಡಂತೆ ಜಿಲ್ಲೆಯ ಪರಿಸರ ಹೋರಾಟಗಾರರು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಯೋಜನೆ ಕೈಬಿಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ರಾಜ್ಯ, ಕೇಂದ್ರ ಸರ್ಕಾರಗಳು ಜಿಲ್ಲೆಯ ಜನರ ತಾಳ್ಮೆ ಪರೀಕ್ಷಿಸಲು ಹೊರಟಂತೆ ಕಾಣುತ್ತಿದೆ. ಸ್ವಾರ್ಥ ಬಯಸುವಾಗ ಇನ್ನೊಂದು ಜಿಲ್ಲೆಯ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಜಿಲ್ಲೆಯ ಸಮಗ್ರ ಜನರ ಪರವಾಗಿ ಶ್ರೀಗಳ ಇಟ್ಟ ಹೆಜ್ಜೆಗೆ ನಾವು ಬೆಂಬಲ ನೀಡಬೇಕು. ಜ. 11ರಂದು ಶಿರಸಿಯಲ್ಲಿ ನಡೆಯುವ ಬೃಹತ್ ಜನ ಸಮಾವೇಶದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀಗಳ ತೀರ್ಮಾನಕ್ಕೆ ಪಕ್ಷಾತೀತ ಬೆಂಬಲ ಸೂಚಿಸಬೇಕಿದೆ. ಜಿಲ್ಲೆಯ ಅರಣ್ಯ ಅತಿಕ್ರಮಣದಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೊಸ ಅತಿಕ್ರಮಣಕ್ಕೆ ಅವಕಾಶವಿಲ್ಲ. ಹಳೆಯ ಅತಿಕ್ರಮಣವನ್ನು ಮುಟ್ಟಲು ನಾವು ಬಿಡುವುದಿಲ್ಲ. ಕೈಗಾ, ಸೀಬರ್ಡ್ ಜಮೀನು ನೀಡಿದವರು ದಾರಿ ಮೇಲೆ ಬಿದ್ದಿದ್ದಾರೆ. ಅಡಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ರೋಗಬಾಧೆಯಿಂದ ರೈತ ಕಂಗೆಟ್ಟಿ ಕುಳಿತಿದ್ದಾನೆ. ಅಲ್ಲಿನ ಶ್ರೀಗಳ ನೇತೃತ್ವದಲ್ಲಿ ಹೋರಾಟ ಮಾಡುವ ಬೊಮ್ಮಾಯಿ ರೈತರ ತಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಜನರ ಸಂಕಷ್ಟ ಅರ್ಥಮಾಡಿಕೊಳ್ಳಬೇಕು. ಕ್ಷೇತ್ರದ ಜನತೆ ನೋವಿನ ಜತೆ ಇರುತ್ತೇನೆ. ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸುವ ಮುನ್ನ ಸಾಧ್ಯಸಾಧ್ಯತೆನ್ನು ಮೊದಲು ನೋಡಬೇಕು ಎಂದು ಆಗ್ರಹಿಸಿದರು.

ನದಿ ನೀರು ಸಮುದ್ರಕ್ಕೆ ಸೇರುವುದು ವ್ಯರ್ಥವಲ್ಲ, ಅದು ಪ್ರಕೃತಿಯ ಸಹಜ ಪ್ರಕ್ರಿಯೆ. ಸಿಹಿ ನೀರು ಸಮುದ್ರಕ್ಕೆ ಸೇರಿದಾಗ ಮಾತ್ರ ಅಲ್ಲಿನ ಮೀನುಗಾರಿಕೆ ಮತ್ತು ಜಲಚರಗಳು ಬದುಕಲು ಸಾಧ್ಯ. ನದಿಯ ಹರಿವನ್ನು ತಡೆದರೆ ಸಮುದ್ರದ ಉಪ್ಪುನೀರು ನದಿಯ ಒಳಭಾಗಕ್ಕೆ ನುಗ್ಗಿ ಇಡೀ ಕರಾವಳಿಯ ಅಂತರ್ಜಲ ಉಪ್ಪಾಗುತ್ತದೆ. ಮೀನುಗಾರರ ಹಿತವನ್ನು ಬಲಿಗೊಟ್ಟು ನೀವು ಯಾರಿಗೆ ಲಾಭ ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷೆ ಸುಮಾ ಉಗ್ರಾಣಕರ, ಪ್ರಮುಖರಾದ ಎಸ್.ಕೆ. ಭಾಗ್ವತ್ ಶಿರ್ಸಿಮಕ್ಕಿ, ದೀಪಕ ಹೆಗಡೆ ದೊಡ್ಡೂರು, ಅಬ್ಬಾಸ ತೋನ್ಸೆ, ಜ್ಯೋಟಿ ಪಾಟೀಲ, ಮೋಹಿನಿ ಬೈಲೂರು ಮತ್ತಿತರರು ಇದ್ದರು.

ಬೊಮ್ಮಯಿ ಅವರೇ ಹುಷಾರ್‌: ಭೀಮಣ್ಣ ಎಚ್ಚರಿಕೆ

ಸ್ವಾರ್ಥಕ್ಕಾಗಿ ಬಸವರಾಜ ಬೊಮ್ಮಾಯಿ ಅಲ್ಲಿನ ವಿವಿಧ ಮಠದ ಸ್ವಾಮೀಜಿ ಮುಂದಾಳತ್ವದಲ್ಲಿ ಸಭೆ ಮಾಡಿ ನದಿ ಜೋಡಣೆ ಬಗ್ಗೆ ಮಾಡುತ್ತಿದ್ದಾರೆ. ಮಾತು ಆಡುವ ಮುನ್ನ ಪಕ್ಕದ ಜಿಲ್ಲೆಯ ಸಂಕಷ್ಟವನ್ನು ಮೊದಲು ಅರ್ಥ ಮಾಡಿಕೊಳ್ಳುವುದು ಒಳಿತು. ಬೊಮ್ಮಾಯಿ ಅಪಾರ ಅನುಭವ ಹೊಂದಿದ್ದಾರೆ. ಆದರೆ ಅವರ ಉದ್ಧಟತನ ಖಂಡಿಸುತ್ತೇವೆ. ಯೋಚನೆ ಮಾಡಿ ಹೆಜ್ಜೆ ಇಡಿ. ನದಿ ಜೋಡಣೆ ಯೋಜನೆ ಇಟ್ಟುಕೊಂಡು ಜಿಲ್ಲೆಗೆ ಹೆಜ್ಜೆ ಇಟ್ಟರೆ ಹುಷಾರ್‌. ಜಿಲ್ಲೆಯ ಜನರು ಖಂಡಿತ ಬುದ್ಧಿ ಕಲಿಸಲಿದ್ದಾರೆ ಎಂದು ಶಾಸಕ ಭೀಮಣ್ಣ ನಾಯ್ಕ ಎಚ್ಚರಿಸಿದರು.