ಸಾರಾಂಶ
ಬಹುಗ್ರಾಮ ಕುಡಿವ ನೀರಿನ ಯೋಜನೆ ಖಂಡಿಸಿ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಸದಸ್ಯರು ಚುನಾವಣಾ ಬಹಿಷ್ಕಾರ ಮಾಡುವುದಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತೀರ್ಥಹಳ್ಳಿ: ಜೆಜೆಎಂ ಯೋಜನೆಯಡಿ ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವ ಕುಡಿವ ನೀರಿನ ಯೋಜನೆ ಕೇಂದ್ರೀಕೃತವಾಗಿದ್ದು ಅವೈಜ್ಞಾನಿಕ ಮತ್ತು ಜನವಿರೋಧಿಯಾಗಿದ್ದು, ಈ ಯೋಜನೆ ಖಂಡಿಸಿ ಮತದಾನ ಬಹಿಷ್ಕರಿಸುವುದಾಗಿ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಸರ್ಕಾರಕ್ಕೆ ಪ್ರತಿಭಟನಾ ಪತ್ರ ಸಲ್ಲಿಸಿದರು.
ಈ ಯೋಜನೆ ವಿರೋದಿಸಿ ಕಳೆದ ಆರು ತಿಂಗಳಿಂದ ಮನವಿ, ಪ್ರತಿಭಟನೆ, ಅಹೋರಾತ್ರಿ ಧರಣಿ ಜನಪ್ರತಿನಿಧಿಗಳ ಜೊತೆ ಸಭೆ ಮತ್ತು ಗಂಜಿ ಚಳುವಳಿ ನಡೆಸಲಾಗಿದೆ. ಜನರ ಹೆಸರಿನಲ್ಲಿ ಜಾರಿಗೊಳ್ಳುವ ಯೋಜನೆಗಳು ಜನರಿಂದ ವಿರೋಧ ವ್ಯಕ್ತವಾದ ನಂತರ ಪೋಲಿಸ್ ಬಲ ಬಳಸಿ ಮಲೆನಾಡಿನ ಪರಿಸರವನ್ನೇ ಹಾಳುಗೆಡವಿ ಮನಸೋ ಇಚ್ಚೆ ಬದಲಾಯಿಸಿಕೊಳ್ಳಲಾಗಿದೆ ಎಂದು ದೂರಿದರು.ಸರ್ಕಾರ ವಿಕೇಂದ್ರಿಕರಣ ವ್ಯವಸ್ಥೆ ಮತ್ತು ಸಂವಿಧಾನದ ಆಶಯ ಕಡೆಗಣಿಸಿರುವುದರಿಂದ ನಮಗಿದ್ದ ನಂಬಿಕೆ ವಿಶ್ವಾಸ ಕಡಿಮೆಯಾಗಿದೆ. ಬಂಡವಾಳಶಾಹಿ ವ್ಯವಸ್ಥೆ, ಸರ್ವಾಧಿಕಾರ ಧೋರಣೆ ಸರ್ಕಾರದ ನಿಲುವು ಖಂಡಿಸಿ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿರುವುದಾಗಿಯೂ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಪತ್ರದಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಕೋಡ್ಲು, ಆಲಗೇರಿ, ಗುಡ್ಡೇಕೊಪ್ಪ, ಕಾಸರವಳ್ಳಿ, ಹಾರೋಗುಳಿಗೆ, ಹುಣಸವಳ್ಳಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ವೈಯಕ್ತಿಕ ವಿವರಗಳುಳ್ಳ ಘೋಷಣಾ ಪತ್ರ ಕೂಡಾ ಸಲ್ಲಿಸಲಾಗಿದೆ.
ಕಂಬ್ಳಿಗೆರೆ ರಾಜೇಂದ್ರ, ಕೋಡ್ಲು ವೆಂಕಟೇಶ್, ತಲುಬಿ ರಾಘವೇಂದ್ರ, ಅಭಿ ಸವಳಿ, ನಾಗರಾಜ್, ಚೆನ್ನಕೇಶವ,ಗಣೇಶ್, ಸುಧೀರ್ ಹೊನ್ನಾನಿ ಮುಂತಾದವರು ಇದ್ದರು.