ಹಳೆ ಹುಬ್ಬಳ್ಳಿ ಪೊಲೀಸ್ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

| Published : Nov 18 2025, 01:00 AM IST

ಸಾರಾಂಶ

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಗಾಂಜಾ ಇನ್ನಿತೆರೆ ಚಟುವಟಿಕೆ ತಡೆಗಟ್ಟಲು ಪೊಲೀಸರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು.

ಹುಬ್ಬಳ್ಳಿ:

ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಸಕಲ ಸೌಲಭ್ಯ ನೀಡುತ್ತಿದ್ದು, ಮಹಾನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿ ಸಹಕಾರ ನೀಡಲಾಗಿದೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ವಾರ್ಡ್‌ ಸಂಖ್ಯೆ 73ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಮತ್ತು ಮೂಲ ಸೌಕರ‍್ಯಗಳ ಅಭಿವೃದ್ಧಿ ಕಾರ್ಪೋರೇಷನ್‌ ಲಿಮಿಟೆಡ್ ಅನುದಾನದಡಿ ₹ 3.35 ಕೋಟಿ ವೆಚ್ಚದಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಗಾಂಜಾ ಇನ್ನಿತೆರೆ ಚಟುವಟಿಕೆ ತಡೆಗಟ್ಟಲು ಪೊಲೀಸರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

ದುರಸ್ತಿಗೆ ಬಂದಿರುವ ಹಳೆಯ ಪೊಲೀಸ್ ಠಾಣೆಯ ಕಟ್ಟಡಗಳನ್ನು ಬದಲಾಗಿ ನೂತನ ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣಕ್ಕೆ ಗೃಹ ಸಚಿವ ಪರಮೇಶ್ವರ ಅವರು ಕ್ರಮಕೈಗೊಂಡಿದ್ದಾರೆ. ಅನುದಾನದ ಕೊರತೆಯಾದರೆ ಹೆಚ್ಚುವರಿ ಅನುದಾನ ಕೂಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಈ ವೇಳೆ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ, ಡಿಸಿಪಿ ರವೀಶ, ಎಸಿಪಿ ಚಿಕ್ಕಮಠ, ಡಿಸಿಸಿ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಪಾಲಿಕೆ ಸದಸ್ಯೆ ಶೀಲಾ ಕಾಟ್ಕರ, ದಲಿತ ಮುಖಂಡ ಗುರುನಾಥ ಹುಳ್ಳಿಕಾಶಿ, ಶ್ರೀನಿವಾಸ ಬೆಳದಡಿ, ಕುಮಾರ ಕುಂದರಳ್ಳಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.