ಭೋವಿ, ವಡ್ಡರ ಜಾತಿ ಬೇರೆ ಬೇರೆ

| Published : Jul 17 2024, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಭೋವಿ ಮತ್ತು ವಡ್ಡರ ಜಾತಿಗಳು ಬೇರೆ ಬೇರೆಯಾಗಿದ್ದು, ವಡ್ಡರ ಸಮುದಾಯದವರಿಗೆ ವಡ್ಡರ ಎಂದು ಮತ್ತು ಮೂಲ ಭೋವಿ ಸಮಾಜದವರಿಗೆ ಭೋವಿ ಎಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು. ಭೋವಿ ಪದ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಭೋವಿ ಸಮಾಜದ ವಿವಿದೊದ್ದೇಶ ಕಲ್ಯಾಣ ಸಂಘದಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ:

ಭೋವಿ ಮತ್ತು ವಡ್ಡರ ಜಾತಿಗಳು ಬೇರೆ ಬೇರೆಯಾಗಿದ್ದು, ವಡ್ಡರ ಸಮುದಾಯದವರಿಗೆ ವಡ್ಡರ ಎಂದು ಮತ್ತು ಮೂಲ ಭೋವಿ ಸಮಾಜದವರಿಗೆ ಭೋವಿ ಎಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು. ಭೋವಿ ಪದ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಭೋವಿ ಸಮಾಜದ ವಿವಿದೊದ್ದೇಶ ಕಲ್ಯಾಣ ಸಂಘದಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ನವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನವರೆಗೆ ನಡೆಸಿದರು. ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಪ್ರತಿಭಟನಾಕಾರರು ಭೋವಿ ಪದವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಭೋವಿ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ, ಭೋವಿ ಜಾತಿ ಮತ್ತು ವಡ್ಡರ ಜಾತಿಗಳು ಬೇರೆ ಬೇರೆಯಾಗಿದ್ದು, ವಡ್ಡರ ಸಮುದಾಯದವರಿಗೆ ವಡ್ಡರ ಎಂದು ಮತ್ತು ನಮ್ಮ ಮೂಲ ಭೋವಿ ಸಮಾಜದವರಿಗೆ ಭೋವಿ ಎಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು 2017ರಲ್ಲಿ ಸರ್ಕಾರ ನೇಮಿಸಿ ವಿ.ಎಸ್.ಉಗ್ರಪ್ಪನವರ ಅಧ್ಯಕ್ಷತೆಯಲ್ಲಿ ರಚಿಸಿದ ಭೋವಿ ಜಾತಿಯ ಸದನ ಸಮಿತಿ ವರದಿ ಕ್ಯಾಬಿನೆಟ್‌ನಲ್ಲಿ ಬಿಲ್ ಪಾಸ್ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಭಾವದ ಮೂಲಕ ವಡ್ಡರ ಸಮುದಾಯದವರು ಬೋವಿ ಎಂದು ಮುಂದುವರೆದಲ್ಲಿ ಸರ್ಕಾರದ ಸೌಲಭ್ಯಗಳು ತಪ್ಪುತ್ತವೆ ಎಂಬ ಹುನ್ನಾರದಿಂದ ಸ್ವಾರ್ಥ ಆತಂಕದಿಂದ ಸಂವಿಧಾನಿಕ ಜಾತಿ ಸಾಮರಸ್ಯವನ್ನು ಲೆಕ್ಕಿಸದೇ ವಡ್ಡರ ಸಮುದಾಯದ ಮುಖಂಡರು, ರಾಜಕಾರಣಿಗಳು, ಸ್ವಾಮೀಜಿಗಳು ನಮ್ಮ ಭೋವಿ ಪದವನ್ನು ಅಪಹರಿಸಿ ತಮ್ಮ ಸಮುದಾಯವನ್ನು ಮರೆಮಾಚಿ, ನಮ್ಮ ಭೋವಿ ಜಾತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಭೋವಿ ಪದ ದುರ್ಬಳಕೆ ಮಾಡುತ್ತಾ ವಡ್ಡರ ಪದವನ್ನು ಮರೆಮಾಚುತ್ತಿರುವ ಕುರಿತು ಹಾಗೂ ಕೋಟೆಕೊತ್ತಲಗಳನ್ನು ಕಟ್ಟುವ ತಮ್ಮ ಗೌರವಯುತ ಕುಲ ಕಸಬನ್ನು ಮರೆಮಾಚಿ ಹೊಸದಾಗಿ ನಮ್ಮ ಮೇನೆ ಹೊರುವ ಕಾಯಕವೂ ಸಹ ತಮ್ಮದು ಎಂದು ಸುಳ್ಳು ಹೇಳಿಕೆಗಳು ನೀಡುತ್ತಿರುವುದರ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಭೋವಿ ಮತ್ತು ವಡ್ಡರ ಜಾತಿಗಳು ಬೇರೆ ಬೇರೆ ಎಂಬ ಸಮಗ್ರ ಆದೇಶ ಮತ್ತು ಸುತ್ತೋಲೆಗಳನ್ನು ಪರಿಶೀಲಿಸಿ ನಿಯಮ ಬಾಹಿರವಾಗಿ ಪದ ಬಳಕೆ ಮಾಡುವುದನ್ನು ತಡೆ ಹಿಡಿಯಬೇಕು. ಸಂವಿಧಾನ ಬದ್ಧವಾಗಿ ಇರುವ ನಮ್ಮ ಭೋವಿ ಜಾತಿ ಅಸ್ತಿತ್ವಕ್ಕೆ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಪ್ರತಿಭಟನಾಕಾರರು ಒತ್ತಾಯಿಸಿದರು.

(ಪೊಟೋ 16ಬಿಕೆಟಿ7, ಅಖಿಲ ಕರ್ನಾಟಕ ಭೋವಿ ಸಮಾಜ ವಿವಿದೊದ್ದೇಶ ಕಲ್ಯಾಣ ಸಂಘದಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು)--------------------------------------------

ಕೋಟ್‌.....

ಭೋವಿ ಸಮಾಜದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದೇವೆ ಎಂದು ತಹಸೀಲ್ದಾರ್‌ ಕಚೇರಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪ್ರಭಾವ ಬಳಸಿ ಸುಳ್ಳು ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ. ನಮ್ಮ ಸಮಾಜದವರು ಈಗಾಗಲೇ ಕೋರ್ಟ್‌ ಮೆಟ್ಟಿಲು ಏರಿದ್ದರೂ ನಮ್ಮ ವಿರುದ್ಧ ಯಾವುದೇ ಪ್ರಕರಣ ಆಗಿಲ್ಲ, ಎಲ್ಲವೂ ನಮ್ಮ ಪರವಾಗಿಯೇ ಬಂದಿವೆ. ಹೀಗಾಗಿ ಭೋವಿ ಪದವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು.

ಲಕ್ಷ್ಮಣ ಭೋವಿ, ಭೋವಿ ಸಮಾಜದ ರಾಜ್ಯಾಧ್ಯಕ್ಷ.