ಸಾರಾಂಶ
- ಗ್ರಾಮಸ್ಥರ ಒತ್ತಾಯ ಮೇರೆಗೆ ಶಾಲೆಗೆ ಬಿಇಒ, ಕ್ಷೇತ್ರ ಸಮನ್ವಯ ಅಧಿಕಾರಿ ಭೇಟಿ, ಪರಿಶೀಲನೆ
- - - - - -- ಶಾಲೆ ಆರಂಭಿಸಿದರೆ ಗ್ರಾಮಸ್ಥರಿಂದ ಸಂಪೂರ್ಣ ಸಹಕಾರ: ಗೌಡರ ಚಂದ್ರಪ್ಪ
- ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಸುವುದಾಗಿ ಹೇಳಿದ ಗ್ರಾಪಂ ಸದಸ್ಯ ನಾಗರಾಜು- ಶಾಲೆಗೆ ಸೇರುವ 11 ವಿದ್ಯಾರ್ಥಿಗಳ ಪಟ್ಟಿ ಬಿಇಒಗೆ ನೀಡಿದ ಮಕ್ಕಳ ಪೋಷಕರು
- - - ಕನ್ನಡಪ್ರಭ ವಾರ್ತೆ ಚನ್ನಗಿರಿತಾಲೂಕಿನ ನಾರಶೆಟ್ಟಿಹಳ್ಳಿ ಗ್ರಾಮದಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಕ್ಕಳು ದಾಖಲಾಗದ ಕಾರಣ ಕಳೆದ 7 ವರ್ಷಗಳಿಂದ ಮುಚ್ಚಲಾಗಿದೆ. ಈ ಶಾಲೆಯನ್ನು ಮತ್ತೆ ಆರಂಭಿಸಬೇಕು ಎಂದು ಗ್ರಾಮಸ್ಥರೇ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಎಸ್.ಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಶಾಲೆ ಆರಂಭಿಸಲು ಗ್ರಾಮಸ್ಥರೇ ಮುಂದಾಗಿರುವ ಕಾರಣ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶಂಕರಪ್ಪ ನಾರಶೆಟ್ಟಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಗ್ರಾಮದ ಜನತೆಯ ಅಭಿಪ್ರಾಯಗಳನ್ನು ಪಡೆದುಕೊಂಡು ಹಳೇ ಕಟ್ಟಡದ ಶಾಲೆಯನ್ನು ಪರಿಶೀಲಿಸಿದರು.ಈ ಸಂದರ್ಭ ಮಾತನಾಡಿದ ಗ್ರಾಮದ ಗೌಡರ ಚಂದ್ರಪ್ಪ ಅವರು, ನಾರಶೆಟ್ಟಿಹಳ್ಳಿ ಶಾಲೆಗೆ 90 ವರ್ಷಗಳ ಇತಿಹಾಸ ಇದೆ. ಇಂಥ ಶಾಲೆಯನ್ನು ಆರಂಭಿಸಿದರೆ ಗ್ರಾಮಸ್ಥರು ಎಲ್ಲ ರೀತಿಯ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಗ್ರಾಪಂ ಸದಸ್ಯ ನಾಗರಾಜ್ ಮಾತನಾಡಿ, ಶಾಲೆಗೆ ಸುಣ್ಣ-ಬಣ್ಣ ಬಳಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಮಾತನಾಡಿ ಗ್ರಾಮದ ಮಕ್ಕಳ, ಪೋಷಕರು ತಮ್ಮ ಮಕ್ಕಳನ್ನು ದಾಖಲು ಮಾಡಿದರೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಈ ಬಗ್ಗೆ ವರದಿ ಮಾಡಲಾಗುವುದು. ಬಳಿಕ ಅನುಮೋದನೆ ಪಡೆದು ಶಿಕ್ಷಕರನ್ನು ನೇಮಕ ಮಾಡಿ, ಬಿಸಿಊಟ ಯೋಜನೆಯೊಂದಿಗೆ ಶಾಲೆಯನ್ನು ಪುನಾರಂಭಿಸುವುದಾಗಿ ತಿಳಿಸಿದರು. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಶೂ ಸೇರಿದಂತೆ ಸರ್ಕಾರದಿಂದ ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳು ಸಿಗಲಿವೆ. ಉತ್ತಮ ಬೋಧನೆ ಕಲ್ಪಿಸಲು ಅಗತ್ಯ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಗ್ರಾಮದ ಪೋಷಕರು 11 ಮಕ್ಕಳನ್ನು ಶಾಲೆಗೆ ದಾಖಲು ಮಾಡುವುದಾಗಿ ತಿಳಿಸಿದರು. ಶಾಲೆಗೆ ಸೇರುವ ವಿದ್ಯಾರ್ಥಿಗಳ ಹೆಸರಿರುವ ಪಟ್ಟಿಯನ್ನು ಸಹ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಿದರು.ಸಿ.ಆರ್.ಪಿ. ಕರಿಸಿದ್ದಪ್ಪ, ಹೊನ್ನೇಬಾಗಿ ಶಾಲೆಯ ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಗ್ರಾಮದ ಮುಖಂಡರಾದ ಮಂಜಪ್ಪ, ಚಂದ್ರಪ್ಪ, ರಾಜಪ್ಪ, ಪೋಷಕರಾದ ವೀಣಾ, ಆಶಾ, ಸುನಂದಮ್ಮ, ರೇಖಾ, ಲಕ್ಷ್ಮಣ, ತಿಪ್ಪೇಶ್, ರಂಗಪ್ಪ, ರವಿಕುಮಾರ್, ಸ್ವಾಮಿ, ರಾಜಪ್ಪ, ಗ್ರಾಮಸ್ಥರು ಹಾಜರಿದ್ದರು.
- - - -16ಕೆಸಿಎನ್ಜಿ2:ಚನ್ನಗಿರಿ ತಾಲೂಕಿನ ನಾರಶೆಟ್ಟೆಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಪುನಾರಂಭಿಸಲು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.