ಸಾರಾಂಶ
ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ಜಮೆ ಆಗುತ್ತಿದ್ದು, ಇನ್ನೂ ಶೇ.20ರಷ್ಟು ಭೂ ಸ್ವಾಧೀನ ಹಣ ಜಮೆ ಪ್ರಕ್ರಿಯೆ ಉಳಿದಿದೆ. ಸದ್ಯ ₹ 35 ಕೋಟಿ ರೈತರ ಖಾತೆಗೆ ಜಮೆ ಆಗಿದೆ. ಕುಕನೂರಿನಲ್ಲಿ ಬೈಪಾಸ್‌ಗೆ 73 ಎಕರೆ, ಯಲಬುರ್ಗಾದಲ್ಲಿ 53 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.
ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕುಕನೂರು:ಜನರ ಬಹುದಿನದ ನಿರೀಕ್ಷಿತ ಯೋಜನೆಯಾದ ಕುಕನೂರು ಹಾಗೂ ಯಲಬುರ್ಗಾ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಏ. 21ರಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಭಾನಾಪೂರ-ಗದ್ದನಕೇರಿ ಎನ್‌ಎಚ್ 367ನ ಕುಕನೂರು, ಯಲಬುರ್ಗಾ, ಗಜೇಂದ್ರಗಡ ಬೈಪಾಸ್ ರಸ್ತೆಗೆ ಫೆ. 8, 2023ರಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿ ₹ 333.96 ಕೋಟಿ ಅನುದಾನ ನೀಡಿದೆ.ಎಷ್ಟು ಬೈಪಾಸ್ ನಿರ್ಮಾಣ:
ಕುಕನೂರು ಬೈಪಾಸ್ 6.88 ಕಿಮಿ, ಯಲಬುರ್ಗಾ 4.76 ಕಿಮಿ, ಗಜೇಂದ್ರಗಡ 5.63 ಸೇರಿ ಒಟ್ಟು 17.256 ಕಿಮೀ ಬೈಪಾಸ್ ರಸ್ತೆ ನಿರ್ಮಾಣ ಆಗಲಿದೆ. ಬೈಪಾಸ್ ರಸ್ತೆಯನ್ನು ಸಂಚಾರಕ್ಕೆ ತೊಂದರೆ ಆಗದಂತೆ ಎರಡು ಪ್ಲೈ ಓವರ್ ನಿರ್ಮಿಸಲಾಗುತ್ತಿದೆ. ಕುಕನೂರಿನ ಗುದ್ನೇಪ್ಪನಮಠ ರೋಡ್ ಹತ್ತಿರ ಒಂದು, ಯಲಬುರ್ಗಾದ ಮೂಧೋಳ ರೋಡಿಗೆ ಇನ್ನೊಂದು ಪ್ಲೈ ಓವರ್ ನಿರ್ಮಿಸಲಾಗುತ್ತಿದೆ. 16 ಮೈನರ್ ಜಂಕ್ಷನ್, 10 ಮೇಜರ್ ಜಂಕ್ಷನ್, 7 ಹೊಸ ಬ್ರೀಡ್ಜ್, 6.8 ಕಿಮಿ ಡ್ರೇನ್, 2 ಬಾಕ್ಸ್ ಕನ್ವರ್ಟ್, 19 ಪೈಪ್ ಕನ್ವರ್ಟ್, 18 ಸ್ಲಾಬ್ ಕನ್ವರ್ಟ್, 43 ಕ್ರಾಸ್ ಕನ್ವರ್ಟ್ ನಿರ್ಮಿಸಲಾಗುತ್ತಿದೆ.ಭೂಸ್ವಾಧೀನ ಹಣ ಜಮಾ:
ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ಜಮೆ ಆಗುತ್ತಿದ್ದು, ಇನ್ನೂ ಶೇ.20ರಷ್ಟು ಭೂ ಸ್ವಾಧೀನ ಹಣ ಜಮೆ ಪ್ರಕ್ರಿಯೆ ಉಳಿದಿದೆ. ಸದ್ಯ ₹ 35 ಕೋಟಿ ರೈತರ ಖಾತೆಗೆ ಜಮೆ ಆಗಿದೆ. ಕುಕನೂರಿನಲ್ಲಿ ಬೈಪಾಸ್‌ಗೆ 73 ಎಕರೆ, ಯಲಬುರ್ಗಾದಲ್ಲಿ 53 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಕುಕನೂರಿನ ಬೈಪಾಸ್ ಕೊಪ್ಪಳ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಿಂದ ಆರಂಭವಾಗಿ ರಾಜೂರು ಸಮೀಪದ ವರೆಗೆ, ಯಲಬುರ್ಗಾ ಬೈಪಾಸ್ ನೂತನ ಅಗ್ನಿಶಾಮಕ ಕಚೇರಿ ನಂತರ ಆರಂಭವಾಗಿ ಮೂಧೋಳ ರಸ್ತೆ ವರೆಗೆ ನಿರ್ಮಾಣವಾಗಲಿದೆ. ಇದರಿಂದ ಕುಕನೂರು, ಯಲಬುರ್ಗಾ ಪಟ್ಟಣದಲ್ಲಿ ಸಂಚರಿಸುವ ಭಾರಿ ಗಾತ್ರದ ವಾಹನ ಪಟ್ಟಣದ ಹೊರವಲಯದಲ್ಲಿಯೇ ಸಂಚರಿಸಲಿವೆ.2014ರಲ್ಲಿ ಯುಪಿಎ ಸರ್ಕಾರದಲ್ಲಿ ಅಂದಿನ ಕೇಂದ್ರ ಭೂಸಾರಿಗೆ ಮಂತ್ರಿಗಳಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಸಹಕಾರದಿಂದ ಭಾನಾಪುರದಿಂದ ಕುಕನೂರು, ಯಲಬುರ್ಗಾ, ಗಜೇಂದ್ರಗಡ ಮಾರ್ಗವಾಗಿ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿವರೆಗೂ ರಾಷ್ಟ್ರೀಯ ಹೆದ್ದಾರಿ 367ನ್ನು ಮಂಜೂರು ಮಾಡಿಸಿದ್ದೆ. ನಂತರದ ದಿನಗಳಲ್ಲಿ ಕುಕನೂರು, ಯಲಬುರ್ಗಾ, ಗಜೇಂದ್ರಗಡ ಪಟ್ಟಣಗಳಿಗೆ ಬೈಪಾಸ್ ರಸ್ತೆಗಳು ಸಹ ಭಾನಾಪೂರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ 367 ಯೋಜನೆಯಿಂದ ಮಂಜೂರಾಗಿವೆ. ಸದ್ಯ ಕುಕನೂರು, ಯಲಬುರ್ಗಾ ಬೈಪಾಸ್ ರಸ್ತೆಗಳಿಗೆ ಏ. 21ರಂದು ಭೂಮಿ ಪೂಜೆ ನೇರವೇರಿಸಲಿದ್ದೇವೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.