ಸಾರಾಂಶ
ಹುದ್ದಾರ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದು, ಶಿಕ್ಷಣ ಸಂಸ್ಥೆಯ ನೂತನ ಕಟ್ಟಡಕ್ಕೆ ಆ.9ರಂದು ಮುಂಜಾನೆ 10 ಗಂಟೆಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹುದ್ದಾರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಹುದ್ದಾರ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಆಧುನಿಕತೆ ಹಾಗೂ ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಂಡು ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಹುದ್ದಾರ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದು, ಶಿಕ್ಷಣ ಸಂಸ್ಥೆಯ ನೂತನ ಕಟ್ಟಡಕ್ಕೆ ಆ.9ರಂದು ಮುಂಜಾನೆ 10 ಗಂಟೆಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹುದ್ದಾರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಹುದ್ದಾರ ಹೇಳಿದರು.ಅಥಣಿ ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಣ ಎಂಬುದು ಬಹಳ ಮುಖ್ಯ. ವಿಶೇಷವಾಗಿ ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಅಥಣಿ ಪಟ್ಟಣದಲ್ಲಿ ಹುದ್ದಾರ ಶಿಕ್ಷಣ ಸಂಸ್ಥೆ ಆರಂಭಿಸಿ ಕಳೆದ ಎರಡು ದಶಕಗಳಿಂದ ಪ್ರಾಥಮಿಕ ಹಂತದ ಶಿಕ್ಷಣ ನೀಡುತ್ತಿದ್ದೇವೆ. ಅಥಣಿ ಪಟ್ಟಣದ ಹೊರವಲಯದಲ್ಲಿರುವ ಮಸರುಗುಪ್ಪಿ ರಸ್ತೆ ಬದಿಗೆ ನಿಯೋಜಿತ ಸ್ಥಳದಲ್ಲಿ ನೂತನ ಕಟ್ಟಡದ ನೀಲನಕ್ಷೆ ತಯಾರಿಸಿದ್ದೇವೆ ಎಂದು ಹೇಳಿದರು.
ಆಧುನಿಕ ಸೌಲಭ್ಯವುಳ್ಳ ಸುವ್ಯವಸ್ಥಿತವಾದ ಕಟ್ಟಡ ನಿರ್ಮಿಸುವ ಮೂಲಕ ಮುಂಬರುವ ದಿನಗಳಲ್ಲಿ ಪ್ರೌಢಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಆರಂಭಿಸುವ ಉದ್ದೇಶ ಹೊಂದಿದ್ದೇವೆ. ಗ್ರಾಮೀಣ ಭಾಗದ ಕಡು ಬಡತನ ಮತ್ತು ನಿರ್ಗತಿಕ ಕುಟುಂಬದ ಮಕ್ಕಳಿಗೆ ಉಚಿತವಾಗಿ ಅಕ್ಷರ, ಅನ್ನ ಮತ್ತು ಆಶ್ರಯ ಎಂಬ ತ್ರಿವಿಧ ಸೇವೆ ನೀಡುವ ಉದ್ದೇಶ ಹೊಂದಿದ್ದೇವೆ. ಇಂತಹ ಕಾರ್ಯಕ್ಕೆ ಅನೇಕ ದಾನಿಗಳು ಕೈಜೋಡಿಸಿದ್ದಾರೆ ಎಂದು ಹೇಳಿದ ಅವರು, ಶಾಲಾ ಕಟ್ಟಡದ ಭೂಮಿಪೂಜೆಯನ್ನು ನಾಗರ ಪಂಚಮಿಯ ಶುಭ ಮುಹೂರ್ತದಲ್ಲಿ ಶುಕ್ರವಾರ ಮುಂಜಾನೆ 10 ಗಂಟೆಗೆ ನೆರವೇರಿಸಲಾಗುವುದು. ಬೆಳಗ್ಗೆ 9 ಗಂಟೆಗೆ ವಿವಿಧ ಮಠಾಧೀಶರು ಹಾಗೂ ಗಣ್ಯಮಾನ್ಯರ ನೇತೃತ್ವದಲ್ಲಿ ಗುಂಡದ ಲಕ್ಷ್ಮಿ ದೇವಸ್ಥಾನದಿಂದ ಕುಂಭಮೇಳದೊಂದಿಗೆ ನಿಯೋಜಿತ ಶಾಲಾ ಕಟ್ಟಡದ ಸ್ಥಳಕ್ಕೆ ಆಗಮಿಸಲಿದೆ. ಸ್ಥಳೀಯ ಶಾಸಕರಾದ ಲಕ್ಷ್ಮಣ ಸವದಿ ಶಾಲಾ ಕಟ್ಟಡದ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಹೇಳಿದರು.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪೂರ್ಣಿಮಾ ಹುದ್ದಾರ, ಆಡಳಿತ ಅಧಿಕಾರಿ ಸಂಜಯ ಕುಲಕರ್ಣಿ, ಗ್ರಾಮ ಪಂಚಾಯತಿ ಸದಸ್ಯ ಪರಶುರಾಮ ಸೊಂದಕರ, ನಿವೃತ್ತ ಶಿಕ್ಷಕ ಐ.ಕೆ. ಕುಂಬಾರ, ಮುಖ್ಯಶಿಕ್ಷಕ ಶ್ರೀದೇವಿ ಜಾಧವ, ಸಮಾಜ ಸೇವಕ ಸಂತೋಷ ಕಾಳೇಲಿ ಇತರರು ಇದ್ದರು.