ಶೀಘ್ರದಲ್ಲೇ ವಾಲ್ಮೀಕಿ ಪುತ್ಥಳಿಗೆ ಭೂಮಿ ಪೂಜೆ

| Published : Oct 18 2024, 12:04 AM IST

ಸಾರಾಂಶ

ಯಳಂದೂರು ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಚಾಮರಾಜನಗರದ ಜಿಲ್ಲಾಡಳಿತದ ಮುಂಭಾಗ ಶೀಘ್ರದಲ್ಲೇ ಮಹರ್ಷಿ ವಾಲ್ಮೀಕಿ, ಭಗೀರಥ ಮಹರ್ಷಿ ಹಾಗೂ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದು ಶೀಘ್ರದಲ್ಲೇ ಇದರ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಗುರುವಾರ ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಾಲ್ಮೀಕಿ ಪುತ್ಥಳಿ ನಿರ್ಮಿಸುವಂತೆ ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಜಿಲ್ಲೆಯಲ್ಲಿ ನಾಯಕ ಜನಾಂಗದವರು ಸರ್ಕಾರ ನಡೆಸುವ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ಇದರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಸಮಾಜ ಕಲ್ಯಾಣ ಸಚಿವರು, ಗುಂಡ್ಲುಪೇಟೆ, ಚಾಮರಾಜನಗರದ ಶಾಸಕರು ಹಾಗೂ ನಾನು ಖುದ್ದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರದ ನಿಯಮಾನುಸಾರ ಇದರ ನಿರ್ಮಾಣಕ್ಕೆ ಕಾಲಾವಕಾಶದ ಅವಶ್ಯಕತೆ ಇದ್ದು ವಾಲ್ಮೀಕಿ ಮಹರ್ಷಿ ಜೊತೆಗೆ ಜಿಲ್ಲಾಡಳಿತದ ಮುಂಭಾಗ ಭಗೀರಥ ಮಹರ್ಷಿ ಹಾಗೂ ಭಕ್ತ ಕನಕದಾಸರ ಪುತ್ಥಳಿ ನಿರ್ಮಾಣವನ್ನೂ ಮಾಡಲಾಗುವುದು ಎಂದರು. ಮುಖ್ಯ ಭಾಷಣಕಾರ ರೇಚಣ್ಣ ಮಾತನಾಡಿ, ಆದಿಕವಿ ವಾಲ್ಮೀಕಿ ಮಹರ್ಷಿ ಭರತ ಖಂಡದ ಒಬ್ಬ ಅದ್ಭುತ ಕವಿಯಾಗಿದ್ದು ಇವರು ರಚಿಸಿದ ರಾಮಾಯಣ ಕಥಾನಕದ ಚರಿತ್ರೆಯೇ ಅದ್ಭುತವಾಗಿದೆ. ಇದರಲ್ಲಿ ಬರುವ ಪ್ರತಿ ಪಾತ್ರಗಳು ಒಂದೊಂದು ವ್ಯಕ್ತಿತ್ವದ ಉದಾಹರಣೆಯಾಗಿ ನಿಲ್ಲುತ್ತದೆ. ಇದರ ಆಧಾರ ಮೇಲೆ ಅನೇಕ ರಾಮಾಯಣದ ಕೃತಿಗಳು ರಚಿತವಾಗಿವೆ. ಇವರು ಎಂದೆಂದಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು.ಕಳೆಗುಂದಿದ ಕಾರ್ಯಕ್ರಮ:

ವಾಲ್ಮೀಕಿ ಪುತ್ಥಳಿಯನ್ನು ಜಿಲ್ಲಾಡಳಿತದ ಮುಂಭಾಗ ನಿರ್ಮಾಣ ಮಾಡಬೇಕು. ಇದಕ್ಕೆ ಅ.೧೭ರ ವಾಲ್ಮೀಕಿ ಜಯಂತಿಯ ದಿನವೇ ಭೂಮಿಪೂಜೆ ನೆರವೇರಿಸಬೇಕೆಂದು ನಾಯಕ ಸಂಘಟನೆಗಳು ಸರ್ಕಾರದ ವತಿಯಿಂದ ಆಚರಿಸುವ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರಿಂದ ಕಾರ್ಯಕ್ರಮ ಕಳೆಗುಂದಿತು. ಕೇವಲ ತಹಸೀಲ್ದಾರ್ ಸಭಾಂಗಣಕ್ಕೆ ಕಾರ್ಯಕ್ರಮ ಸೀಮಿತವಾಗಿತ್ತು. ನಾಯಕ ಜನಾಂಗದ ಚುನಾಯಿತ ಜನಪ್ರತಿನಿಧಿಗಳೂ ಕೂಡ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಕಂದಾಯ ಇಲಾಖೆ, ಪಪಂ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಕೆಲ ಇಲಾಖೆಯ ಅಧಿಕಾರಿಗಳು ಹಾಗೂ ಕೆಲವು ಪ್ರಗತಿಪರ ಸಂಘಟನೆಗಳ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಜನರಿಲ್ಲದೆ ಕಾರ್ಯಕ್ರಮ ಸೊರಗಿತ್ತು. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಸದಸ್ಯೆ ಸುಶೀಲಾ ಪ್ರಕಾಶ್ ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್‌ಬೇಗ್, ಶ್ರೀಕಂಠಸ್ವಾಮಿ ತಹಸೀಲ್ದಾರ್ ಜಯಪ್ರಕಾಶ್, ಸಮಾಜಕಲ್ಯಾಣ ಇಲಾಖೆಯ ಕೇಶವಮೂರ್ತಿ, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಸಿಡಿಪಿಒ ಸಕಲೇಶ್ವರ್, ವಡಗೆರೆದಾಸ್, ದಸಂಸ ಜಿಲ್ಲಾ ಸಂಚಾಲಕ ರಾಜಣ್ಣ, ಚಾಮುಲ್ ನಿರ್ದೇಶಕ ರೇವಣ್ಣ, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಸೇರಿದಂತೆ ಅನೇಕರು ಇದ್ದರು.