ಸಾಹಿತ್ಯ ಸಮ್ಮೇಳನ ವೇದಿಕೆಗೆ ಇಂದು ಭೂಮಿ ಪೂಜೆ

| Published : Nov 22 2024, 01:15 AM IST

ಸಾರಾಂಶ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ವಿದ್ವಾಂಸರಾದ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳನ್ನೇ ಆಯ್ಕೆ ಮಾಡಿರುವುದು ಎಲ್ಲಾ ಸಾಹಿತಿಗಳಿಗೂ ಸಮಾಧಾನವನ್ನು ತಂದಿದೆ. ಗೊರುಚ ಆಯ್ಕೆ ವಿಷಯದಲ್ಲೂ ಯಾವುದೇ ವಿವಾದಗಳಿಲ್ಲದೆ ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡಂತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಡಿ.೨೦, ೨೧ ಮತ್ತು ೨೨ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣಕ್ಕೆ ಶುಕ್ರವಾರ (ಜು.೨೩)ದಂದು ಭೂಮಿ ಪೂಜೆ ನಡೆಯಲಿದೆ. ಮಳವಳ್ಳಿ ಕ್ಷೇತ್ರದ ಶಾಸಕ ಹಾಗೂ ವೇದಿಕೆ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಲಿದ್ದಾರೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ವಿದ್ವಾಂಸರಾದ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳನ್ನೇ ಆಯ್ಕೆ ಮಾಡಿರುವುದು ಎಲ್ಲಾ ಸಾಹಿತಿಗಳಿಗೂ ಸಮಾಧಾನವನ್ನು ತಂದಿದೆ. ಗೊರುಚ ಆಯ್ಕೆ ವಿಷಯದಲ್ಲೂ ಯಾವುದೇ ವಿವಾದಗಳಿಲ್ಲದೆ ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡಂತಾಗಿದೆ. ಜೊತೆಗೆ ಸರ್ವಾಧ್ಯಕ್ಷರ ಪೀಠಕ್ಕೆ ಸಾಹಿತ್ಯೇತರರನ್ನು ಆಯ್ಕೆ ಮಾಡಬಹುದೆಂಬ ಸಾಹಿತಿಗಳ ಆತಂಕವೂ ದೂರವಾಗಿದೆ. ಸಾಹಿತ್ಯೇತರರನ್ನು ಆಯ್ಕೆ ಮಾಡುವ ವಿವಾದಾತ್ಮಕ ಚರ್ಚೆಯನ್ನು ಎಳೆದುತಂದ ಪರಿಷತ್‌ನ ಅಧ್ಯಕ್ಷ ಡಾ.ಮಹೇಶ್ ಜೋಶಿ ಈಗ ತುಟಿಬಿಚ್ಚದೆ ಮೌನಕ್ಕೆ ಶರಣಾಗಿದ್ದಾರೆ.

ಸಮ್ಮೇಳನಕ್ಕೆ ಸಂಬಂಧಿಸಿದಂತೆ ೨೮ ಸಮಿತಿ ರಚಿಸಲಾಗಿದೆ. ಹೊರಗಿನಿಂದ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಹೇಗಿರಬೇಕು, ಸಾರಿಗೆ ವ್ಯವಸ್ಥೆಯನ್ನು ಹೇಗೆ ಕಲ್ಪಿಸಿಕೊಡಬೇಕು ಎಂಬೆಲ್ಲಾ ರೂಪು-ರೇಷೆಗಳನ್ನು ಜಿಲ್ಲಾಡಳಿತ ಸಿದ್ಧಪಡಿಸಿಟ್ಟುಕೊಂಡಿದೆ.

ನಗರದ ಹೊರವಲಯದಲ್ಲಿರುವ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ೬೦ ಎಕರೆ ಪ್ರದೇಶದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಮುಖ್ಯ ವೇದಿಕೆ, ಮೂರು ಸಮಾನಾಂತರ ವೇದಿಕೆ, ಊಟದ ವ್ಯವಸ್ಥೆಯನ್ನು ಒಂದೇ ಸ್ಥಳದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳಿಗೆ ಮಂಡ್ಯದ ಸವಿನೆನಪಿಗಾಗಿ ಬೆಲ್ಲವನ್ನು ನೀಡುವುದಕ್ಕೆ ಜಿಲ್ಲಾಡಳಿ ತಯಾರಿ ಮಾಡಿಕೊಂಡಿದೆ.

ಮುಖ್ಯ ವೇದಿಕೆ ಸೇರಿದಂತೆ ಇತರೆ ವೇದಿಕೆಗಳಿಗೆ ಯಾರ ಯಾರ ಹೆಸರನ್ನಿಡಬೇಕು. ಮಹಾದ್ವಾರಗಳಿಗೆ ಇಡಬೇಕಾದ ಹೆಸರುಗಳ ಪರಾಮರ್ಶೆ ನಡೆಸಲಾಗುತ್ತಿವೆ. ವಿವಾದಗಳಿಗೆ ಒಳಗಾಗದಂತೆ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಅದೂ ಸಹ ಅಂತಿಮಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಟಿಪ್ಪು ವಿಷಯವನ್ನು ಗೋಷ್ಠಿಗೆ ಸೇರಿಸಲೇಬೇಕೆಂಬ ಆಗ್ರಹವನ್ನು ಸಾಹಿತಿ ಜಗದೀಶ್ ಕೊಪ್ಪ ಅವರು ಪರಿಷತ್ತಿನವರ ಮುಂದಿಟ್ಟಿದ್ದಾರೆ. ಟಿಪ್ಪು ವಿಷಯ ಸೇರಿಸದಿದ್ದರೆ ಸಮ್ಮೇಳನದಿಂದ ದೂರ ಉಳಿಯುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಟಿಪ್ಪು ವಿಚಾರವನ್ನು ಗೋಷ್ಠಿಗೆ ಸೇರಿಸಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಹಿಂದೂಪರ ಸಂಘಟನೆಯವರೂ ಎಚ್ಚರಿಸಿದ್ದಾರೆ. ಗೋಷ್ಠಿಗಳು ಯಾವ ಯಾವ ವಿಷಯಗಳನ್ನು ಒಳಗೊಳ್ಳಲಿವೆ ಎನ್ನುವುದರ ಬಗ್ಗೆಯೂ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈಗಾಗಲೇ ಜಿಲ್ಲೆಯ ಅನೇಕ ಹಿರಿಯ ಸಾಹಿತಿಗಳು, ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳೊಂದಿಗೆ ಸಭೆ ನಡೆಸಿ ಅಭಿಪ್ರಾಯ, ಸಲಹೆ ಪಡೆದುಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ವೈಶಿಷ್ಟ್ಯತೆ, ಯಕ್ಷಗಾನದ ಮೂಲ ಮಂಡ್ಯ ಎಂಬ ವಿಚಾರವನ್ನು ಪ್ರಚುರಪಡಿಸುವುದು, ಜಾನಪದ ಕ್ಷೇತ್ರದ ಶ್ರೀಮಂತಿಕೆಯ ಅನಾವರಣ ಸೇರಿದಂತೆ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಕಲಾ ಪ್ರಾಕಾರಗಳನ್ನು ರಾಷ್ಟ್ರಮಟ್ಟಕ್ಕೆ ಪರಿಚಯವಾಗುವಂತೆ ಸಮ್ಮೇಳನದಲ್ಲಿ ಮಾಡಬೇಕೆಂಬ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಅವೆಲ್ಲವನ್ನೂ ಸ್ವೀಕರಿಸಿಕೊಂಡು ಪ್ರಮುಖ ವಿಷಯಗಳನ್ನು ಗೋಷ್ಠಿಗಳಿಗೆ ಸೇರ್ಪಡೆ ಮಾಡುವ ಕೆಲಸವೂ ಆರಂಭಗೊಂಡಿದೆ.