ವಸುದೇವ ಭೂಪಾಳಂರವರ ವಿಚಾರಧಾರೆ ವಿಶಿಷ್ಟವಾಗಿತ್ತು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಸೆರೆಮನೆ ವಾಸ ಅನುಭವಿಸಿದ್ದರು. ಮಹಾತ್ಮ ಗಾಂಧೀಜಿ ಅವರಿಗೆ ಜೈಲಿನಲ್ಲಿಯೇ ಕನ್ನಡ ಓದಲು ಮತ್ತು ಬರೆಯಲು ಹೇಳಿಕೊಡುವ ಮೂಲಕ ಅವರಿಂದ ಕನ್ನಡದಲ್ಲಿಯೇ ಸಹಿ ಮಾಡಿರುವ ಪತ್ರವನ್ನು ಪಡೆದಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಂ.ಎಂ. ಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ವಸುದೇವ ಭೂಪಾಳಂರವರ ವಿಚಾರಧಾರೆ ವಿಶಿಷ್ಟವಾಗಿತ್ತು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಸೆರೆಮನೆ ವಾಸ ಅನುಭವಿಸಿದ್ದರು. ಮಹಾತ್ಮ ಗಾಂಧೀಜಿ ಅವರಿಗೆ ಜೈಲಿನಲ್ಲಿಯೇ ಕನ್ನಡ ಓದಲು ಮತ್ತು ಬರೆಯಲು ಹೇಳಿಕೊಡುವ ಮೂಲಕ ಅವರಿಂದ ಕನ್ನಡದಲ್ಲಿಯೇ ಸಹಿ ಮಾಡಿರುವ ಪತ್ರವನ್ನು ಪಡೆದಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಂ.ಎಂ. ಸ್ವಾಮಿ ಹೇಳಿದರು.ಅವರು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಗರದ ಉಂಬ್ಳೆಬೈಲು ರಸ್ತೆ, ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ ವಸುದೇವ ಭೂಪಾಳಂ ಅವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರೊಂದಿಗೆ ಜೈಲಿನಲ್ಲಿದ್ದ ಸಂದರ್ಭದಲ್ಲಿ ಗಾಂಧೀಜಿಯವರಿಗೆ ಕನ್ನಡ ಓದಲು ಮತ್ತು ಬರೆಯಲು ಕಲಿಸಿದ್ದರು.ಜೈಲಿನಲ್ಲಿಯೇ ಕನ್ನಡದಲ್ಲಿ ಸಹಿ ಮಾಡಿದ ಪತ್ರವನ್ನು ಪಡೆದಿರುವುದು ಅವರಿಗೆ ಕನ್ನಡದ ಮೇಲಿನ ಪ್ರೀತಿ, ಅಭಿಮಾನ, ಬದ್ಧತೆ, ಆತ್ಮಸ್ಥೈರ್ಯ ಮತ್ತು ಮನೋಬಲಕ್ಕೆ ಸಾಕ್ಷಿಯಾಗಿದೆ ಎಂದರು.
ಸರ್ವಮಂಗಳಮ್ಮ ಹಾಗೂ ಶಿವಶಂಕರಯ್ಯ ಅವರ ದತ್ತಿದಾನಿಗಳಾದ ಡಾ. ವಿಜಯಾದೇವಿ ಅವರು ಮಾತನಾಡಿ, ಇಂದಿನ ವಿಶೇಷ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿರುವುದು ತಮಗೆ ಅಪಾರ ಸಂತೋಷ ಉಂಟು ಮಾಡಿದೆ. ವಚನ ಗಾಯನದಲ್ಲಿ ಭಾಗವಹಿಸುವವರು ವಚನಗಳಲ್ಲಿರುವ ಪದಗಳನ್ನು ಅರ್ಥೈಸಿಕೊಂಡು, ಅವುಗಳ ಉಚ್ಚಾರಣೆಯನ್ನು ಸ್ಪಷ್ಟವಾಗಿ ಹಾಗೂ ಶುದ್ಧವಾಗಿ ಹಾಡಬೇಕು ಎಂದು ಸಲಹೆ ವ್ಯಕ್ತಪಡಿಸಿದರು.ವಸುದೇವ ಭೂಪಾಳಂ ದತ್ತಿ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ರತ್ನಯ್ಯ, ವಸುದೇವ ಭೂಪಾಳಂ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಮನಾರ್ಹವಾದ ಸೇವೆ ಸಲ್ಲಿಸಿರುವ ಬಹುಮುಖ ಪ್ರತಿಭೆಯ ಸಾಹಿತಿಯಾಗಿದ್ದರು. ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ್ದರು. ಹಲವಾರು ಕೃತಿ ರಚಿಸಿದ್ದು, ಅವುಗಳಲ್ಲಿ ‘ದೇವರು ಸತ್ತ’ ಎಂಬ ಲೇಖನ ಅತ್ಯಂತ ಗಮನಾರ್ಹವಾದುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್. ಸುಧಾಮಣಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಮಾತನಾಡಿದರು.ವಚನ ಗಾಯನ ಸ್ಪರ್ಧೆ: ವಚನ ಗಾಯನ ಸ್ಪರ್ಧೆಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದವು. ಅತ್ಯುತ್ತಮ ಮೊದಲ ಮೂರು ತಂಡಗಳಿಗೆ ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನ ಡಾ. ವೀಣಾ ಭಟ್ ಅವರ ನೇತೃತ್ವದ ಹವ್ಯಕ ಮಹಿಳಾ ವೇದಿಕೆ ಮತ್ತು ದ್ವಿತೀಯ ಬಹುಮಾನ ಸುನಂದ ರವರ ನೇತೃತ್ವದ ಶಾಶ್ವತಿ ಮಹಿಳಾ ವೇದಿಕೆ ಹಾಗೂ ತೃತೀಯ ಬಹುಮಾನ ಸದಾಶಿವಪ್ಪರವರ ನೇತೃತ್ವದ ಭದ್ರಾ ಸುಗಮ ಸಂಗೀತ ತಂಡ ಪಡೆದುಕೊಂಡವು.
ವಚನ ಗಾಯನದಲ್ಲಿ ಭಾಗವಹಿಸಿದ ತಂಡಗಳ ವಿಶೇಷ ವೇಷಭೂಷಣ ಹಾಗೂ ವಸ್ತ್ರ ವಿನ್ಯಾಸಕ್ಕೂ ಪ್ರೋತ್ಸಾಹ ನೀಡಲಾಯಿತು. ಸುಂದರ ವಸ್ತ್ರ ವಿನ್ಯಾಸದಲ್ಲಿ ಪ್ರಥಮ ಸ್ಥಾನ ಕದಳಿ ಮಹಿಳಾ ವೇದಿಕೆ ಹಾಗೂ ದ್ವಿತೀಯ ಸ್ಥಾನವನ್ನು ಅಂಬಾಭವಾನಿ ತಂಡ ಪಡೆದುಕೊಂಡಿತು. ವಚನ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳಿಗೂ ಪ್ರಶಸ್ತಿ ಪತ್ರ ಹಾಗೂ ವಿಜೇತರಾದವರಿಗೆ ಗೌರವ ಧನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.ತೀರ್ಪುಗಾರರಾಗಿ ಸಂಗೀತ ಶಿಕ್ಷಕಿ ಪುಷ್ಪಾ ಹಾಗೂ ಶ್ರೀನಿವಾಸ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ರೇವಣಪ್ಪ, ದಿವಾಕರ, ಹರೀಶ, ಜಂಬೂಸ್ವಾಮಿ, ಲಕ್ಷ್ಮೀದೇವಿ ಜಂಬೂಸ್ವಾಮಿ, ಲಲಿತಾಂಬ ಹಾಗೂ ಸುಚಿತ್ರ ಅವರನ್ನೊಳಗೊಂಡ ತಂಡದಿಂದ ನಾಡಗೀತೆ ಹಾಡಲಾಯಿತು. ಪರಿಷತ್ ಸಂಘಟನಾ ಕಾರ್ಯದರ್ಶಿ ಬಿ. ಕಮಲಾಕರ ಸ್ವಾಗತಿಸಿ, ಡಿ. ನಾಗೋಜಿರಾವ್ ನಿರೂಪಿಸಿದರು. ತಾಲೂಕು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಮೋಹನ್ ಕುಮಾರ್ ವಂದಿಸಿದರು.