ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಆಧುನಿಕ ಕನ್ನಡ ಸಾಹಿತ್ಯದ ಹೆಸರಾಂತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಹೇಳಿದರು.ಪಟ್ಟಣದ ಬಾಲು ಪಬ್ಲಿಕ್ ಶಾಲೆ ಆವರಣದಲ್ಲಿ ಭಾರತ ವಿಕಾಸ ಪರಿಷತ್ತು ಕಣ್ವ ಶಾಖೆ ಆಯೋಜಿಸಿದ್ದ ಡಾ. ಎಸ್.ಎಲ್. ಬೈರಪ್ಪನವರಿಗೆ ನುಡಿ ನಮನ ಮತ್ತು ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಾಹಿತ್ಯ, ತತ್ವಶಾಸ್ತ್ರ, ಸಂಸ್ಕೃತಿ ಮತ್ತು ಬೌದ್ಧಿಕ ಕ್ಷೇತ್ರಗಳಲ್ಲಿ ಭೈರಪ್ಪ ಅವರು ಅಪ್ರತಿಮ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಕೃತಿಗಳ ಮೂಲಕ ಕನ್ನಡ ಸಂಸ್ಕೃತಿಯ ಬೇರುಗಳಿಗೆ ಬದ್ಧವಾಗಿದ್ದ ಮೇರು ಸಾಹಿತಿ, ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು. ತಾವು ನಂಬಿದ ಮೌಲ್ಯಗಳನ್ನು ಕಾಪಿಟ್ಟುಕೊಂಡು ಬರಹಗಳಲ್ಲಿ ಮೂಡಿಸಿದ ಶೈಲಿ ನಿಜಕ್ಕೂ ಸೋಜಿಗ. ಅವರ ಜೀವನವೇ ಇತರರಿಗೆ ಸ್ಫೂರ್ತಿ, ಅವರ ಪ್ರತಿಯೊಂದು ಕಾದಂಬರಿಯಲ್ಲಿ ಭಾಷೆಯ ಸೊಗಸು, ಪಾತ್ರ ಪರಿಕಲ್ಪನೆ ಮತ್ತು ಅಪರೂಪದ ಕಥನ ಶೈಲಿಯನ್ನು ಕಾಣಬಹುದಾಗಿದೆ ಎಂದರು.
ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ವೆಂಕಟಸುಬ್ಬಯ್ಯ ಚಟ್ಟಿ ಮಾತನಾಡಿ, ಭೈರಪ್ಪ ಕೇವಲ ಕಾದಂಬರಿಕಾರರಲ್ಲ, ಅವರು ಜೀವನವನ್ನು ವಿಶ್ಲೇಷಿಸಿ ಮುಂದಿನ ಪೀಳಿಗೆಗೆ ದಾರಿ ತೋರಿಸಿದ ಚಿಂತಕರು, ಕಾದಂಬರಿ ಲೋಕದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಿರುವ ಭೈರಪ್ಪನವರು ಲಕ್ಷಾಂತರ ಓದುಗ ಬಳಗವನ್ನು ಹೊಂದಿದ್ದರು. ಜ್ಞಾನಪೀಠ ಪ್ರಶಸ್ತಿಗೆ ಸರ್ವರೀತಿಯಿಂದಲೂ ಅರ್ಹರಾಗಿದ್ದ ಅವರ ಸಾಹಿತ್ಯಕ್ಕೆ ಈಗಲಾದರೂ ಜ್ಞಾನಪೀಠ ಪ್ರಶಸ್ತಿ ಸಿಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಧರಣೇಶ್ ರಾಂಪುರ ಮಾತನಾಡಿ, ಕನ್ನಡ ಓದುಗರ ಮನದಲ್ಲಿ ಭೈರಪ್ಪ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಪ್ರತಿಯೊಂದು ಕೃತಿ ಓದುಗರಿಗೆ ಪ್ರೇರಣೆ, ಅವರ ಕೃತಿಗಳು ಮುಂದಿನ ಪೀಳಿಗೆಯ ದಾರಿದೀಪವಾಗಲಿ ಎಂದು ಹೇಳಿದರು.
ಭಾ.ವಿ.ಪ ಅಧ್ಯಕ್ಷ ಪುಟ್ಟಸ್ವಾಮಿಗೌಡ (ಡಿಪಿಎಸ್) ಮಾತನಾಡಿ, ಭೈರಪ್ಪರ ಸಾಹಿತ್ಯ ಜೀವನಕ್ಕೆ ಸ್ಫೂರ್ತಿ ತುಂಬುತ್ತದೆ. ಯುವಜನತೆಗೆ ಧೈರ್ಯ, ಸತ್ಯ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತದೆ. ಅವರ ಕಾದಂಬರಿಗಳು ಓದುಗರ ಮನಸ್ಸಿನಲ್ಲಿ ಚಿಂತನೆಗೆ ದಾರಿ ತೆರೆಯುತ್ತವೆ, ಅವರು ಜೀವನ, ಚಿಂತನೆ ಮತ್ತು ಸಾಹಿತ್ಯದ ಮೂಲಕ ಪ್ರತಿ ಹಂತದಲ್ಲಿ ಪ್ರೇರಣೆ ನೀಡಿದ್ದರು ಎಂದರು.ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಸಾಹಿತಿಗಳಾದ ಎಲೆಕೆರೆ ಶಿವರಾಮ್, ಕೂರಣಗೆರೆ ಕೃಷ್ಣಪ್ಪ, ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಂ.ಶಿವಮಾದು, ಭಾವಿಪ ಮಾಜಿ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷ ಕರಿಯಪ್ಪ, ಎಸ್‌ಡಿಎಂಸಿ ಸಮನ್ವಯ ವೇದಿಕೆ ಉಪಾಧ್ಯಕ್ಷ ನಾಗವಾರ ಶಂಭುಗೌಡ, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಬಿ.ಎನ್ ಕಾಡಯ್ಯ, ಭಾ.ವಿ.ಪ ಪ್ರಾಂತ್ಯ ಪದಾಧಿಕಾರಿಗಳಾದ , ಗುರುಮಾದಯ್ಯ, ಬೆಸ್ಕಾಂ ಶಿವಲಿಂಗಯ್ಯ, ಭಾರತ ಸೇವಾದಳ ತಾಲೂಕು ಅಧ್ಯಕ್ಷ ಗೋವಿಂದಯ್ಯ, ಲಯನ್ ತಿಪ್ರೇಗೌಡ, ರಾಘವೇಂದ್ರ ಮಯ್ಯ, ವಿ. ಪಿ.ವರದರಾಜು, ಇತರರು ಇದ್ದರು.
ಡಾ. ಎಸ್. ಎಲ್. ಭೈರಪ್ಪ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ಸಲ್ಲಿಸಿ, ಕನ್ನಡ ಸಾಹಿತ್ಯ ಲೋಕದ ಮಹಾನ್ ದಿಗ್ಗಜನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.