ಸಾರಾಂಶ
ಕನ್ನಡಪ್ರಭವಾರ್ತೆ ತುರುವೇಕೆರೆ
ಎಸ್.ಎಲ್.ಭೈರಪ್ಪನವರು ಕೇವಲ ಸಾಹಿತಿಯಾಗಿ ಜನರಿಗೆ ಸಾಹಿತ್ಯದ ಸವಿಯನ್ನು ಉಣಿಸಲಿಲ್ಲ. ಅವರು ಸಮಾಜಮುಖಿಯಾಗಿ ಎಲೆಮರೆಕಾಯಿಯಂತೆ ಜನರ ಸೇವೆ ಮಾಡಿ ಜನಮಾನಸದಲ್ಲಿ ಉಳಿಯುವಂತೆ ಇದ್ದರು ಎಂದು ವೈದ್ಯ ಡಾ.ಎ.ನಾಗರಾಜ್ ಹೇಳಿದರು.ಪಟ್ಟಣದ ಕನ್ನಡ ಭವನದಲ್ಲಿ ಸ್ಥಳೀಯ ಕಸಾಪ ಘಟಕ ಹಮ್ಮಿಕೊಂಡಿದ್ದ ಎಸ್.ಎಲ್. ಭೈರಪ್ಪನವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಾಹಿತಿಯೆಂದರೆ ಕೇವಲ ಪುಸ್ತಕ ಬರೆದು ಪ್ರಕಟಿಸುವುದಲ್ಲ, ತನಗೆ ಮನ್ನಣೆ, ಪ್ರೀತಿ ಕೊಟ್ಟ ಸಮಾಜದ ಋಣ ತೀರಿಸುವುದು ಸಾಹಿತಿಯಾದವನ ಆದ್ಯ ಕರ್ತವ್ಯವೂ ಹೌದು. ತಮ್ಮ ಊರಿನ ಅಭಿವೃದ್ಧಿಗೆ ಕಂಕಣತೊಟ್ಟು ಕೆರೆ ಕಾಯಕಲ್ಪ ಮಾಡಿಸಿ, ಸದಾ ಊರಿನ ಹಿತಕ್ಕೆ ದುಡಿದ ಎಸ್.ಎಲ್.ಭೈರಪ್ಪ ಶ್ರೇಷ್ಠ ಸಾಹಿತಿ ಮಾತ್ರ ಅಲ್ಲ ಸಮುದಾಯದ ಹಿತಚಿಂತಕ ಎನಿಸಿಕೊಂಡಿದ್ದಾರೆ ಎಂದರು. ಬರಹಗಾರ ತುರುವೇಕೆರೆ ಪ್ರಸಾದ್ ಭೈರಪ್ಪನವರ ಜೀವನಾದರ್ಶಗಳ ಬಗ್ಗೆ ಮಾತನಾಡಿ, ತತ್ವಶಾಸ್ತ್ರಕ್ಕಿಂತ ಮಾನವನ ಸಂವೇದನೆಗಳು, ಭಾವನೆ ಅನುಭವಗಳೇ ಶ್ರೇಷ್ಠವಾದದ್ದು ಎಂಬುದನ್ನು ಭೈರಪ್ಪನವರು ಕಂಡುಕೊಂಡಿದ್ದರು. ತಮ್ಮ ಅಪಾರ ಅನುಭವದ ಹಿನ್ನಲೆಯಲ್ಲಿ ಶ್ರೇಷ್ಠ ಕೃತಿಗಳನ್ನು ಈ ನಾಡಿಗೆ ನೀಡಿದ್ದಾರೆ. ಜನರ ಬದುಕಿನ ಕಷ್ಟ ಕಾರ್ಪಣ್ಯಗಳನ್ನು ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ದಾಖಲಿಸಿ ಜನರ ಕಲ್ಪನೆಯನ್ನು ಹಿಗ್ಗಿಸಿ ಅವರಿಗೇ ಕೊಟ್ಟಿದ್ದಾರೆ. ಹಾಗಾಗಿ ಅವರ ಕಾದಂಬರಿಗಳು ಜನರಿಗೆ ಇಷ್ಟವಾಗುತ್ತವೆ ಎಂದರು. ಕಸಾಪ ಗೌರವಾಧ್ಯಕ್ಷ ಟಿ.ಎಸ್.ಬೋರೇಗೌಡ, ಅಧ್ಯಕ್ಷ ಡಿ.ಪಿ.ರಾಜು, ಉಪಾಧ್ಯಕ್ಷ ಎಂ.ಆರ್. ಪರಮೇಶ್ವರ ಸ್ವಾಮಿ, ಪ್ರೊ.ಕೆ. ಪುಟ್ಟರಂಗಪ್ಪ, ಪ್ರೊ. ಗಂಗಾಧರ ದೇವರಮನೆ, ಪರಮೇಶ್, ರೂಪಶ್ರೀ ವಿಶ್ವನಾಥ್, ಭಾರತಿ, ದೇವಮ್ಮ ಶಂಕರಪ್ಪ, ವಿಜಯಕುಮಾರ್, ವಿಶ್ವಾರಾಧ್ಯ ಎಸ್.ಎಂ. ಕುಮಾರಸ್ವಾಮಿ, ತಂ.ಪಾ.ಚಂದ್ರಕೀರ್ತಿ, ಸತೀಶ್, ಕುವೆಂಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವೆಂಕಟೇಶ್, ನಂಜೇಗೌಡ, ರಾಮಚಂದ್ರು, ಎಚ್.ಆರ್.ರಂಗನಾಥ್ ಇತರರು ಭೈರಪ್ಪನವರ ಕುರಿತು ಮಾತನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.