ರಾಜ್ಯದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಡದಿ ಹೋರಾಟ, ಬಿಡದಿ ಚಲೋ ಎಂಬ ಕಾರ್ಯಕ್ರಮಗಳನ್ನು ಹಾಕಿಕೊಂಡು ಅಲ್ಲಿ ಬರುತ್ತಿವೆ. ನಿಮಗೆ ನಿಜವಾಗಿಯೂ ಬಿಡದಿ ಮತ್ತು ಸರ್ಜಾಪುರ ರೈತರ ಮೇಲೆ ಕರುಣೆ ಇದ್ದಿದ್ದರೆ, ಸೋಮವಾರದ ತನಕ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಮೂರು ಪಕ್ಷಗಳೂ ಬಿಡದಿ ರೈತರ ಬಗ್ಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ಚರ್ಚೆಯನ್ನೇ ಮಾಡಲಿಲ್ಲ. ಅಂದರೆ ನಿಮಗೆ ನಿಮ್ಮ ಸಮಾರಂಭಕ್ಕೆ ಚಪ್ಪಾಳೆ ತಟ್ಟುವವರು ಬೇಕು. ನಿಮ್ಮ ಅಧಿಕಾರ ಇದ್ದಾಗ ನೀವು ಮಾಡುತ್ತಿದ್ದೀರಿ, ಈಗ ಅವರಿಗೆ ಅಧಿಕಾರ ಇದೆ ಅವರು ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಡದಿ ಟೌನ್ ಶಿಪ್ ಕೈಬಿಡುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಹೋರಾಟ- ಕರ್ನಾಟಕ ಸಮಿತಿ ಮಂಗಳವಾರ ರೈತರ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿತು.ನಗರದ ಸ್ವಾತಂತ್ರ್ಯಉದ್ಯಾನವನದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ರೈತ ಮುಖಂಡರು, ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಸುಮಾರು 530 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ತನ್ನ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.
ಬೈರಮಂಗಲದ ರೈತ ಮಹಿಳೆ ಸುಮಾ ಎಂಬುವವರು ಮಾತನಾಡಿ, ರಾಜ್ಯದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಡದಿ ಹೋರಾಟ, ಬಿಡದಿ ಚಲೋ ಎಂಬ ಕಾರ್ಯಕ್ರಮಗಳನ್ನು ಹಾಕಿಕೊಂಡು ಅಲ್ಲಿ ಬರುತ್ತಿವೆ. ನಿಮಗೆ ನಿಜವಾಗಿಯೂ ಬಿಡದಿ ಮತ್ತು ಸರ್ಜಾಪುರ ರೈತರ ಮೇಲೆ ಕರುಣೆ ಇದ್ದಿದ್ದರೆ, ಸೋಮವಾರದ ತನಕ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಮೂರು ಪಕ್ಷಗಳೂ ಬಿಡದಿ ರೈತರ ಬಗ್ಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ಚರ್ಚೆಯನ್ನೇ ಮಾಡಲಿಲ್ಲ. ಅಂದರೆ ನಿಮಗೆ ನಿಮ್ಮ ಸಮಾರಂಭಕ್ಕೆ ಚಪ್ಪಾಳೆ ತಟ್ಟುವವರು ಬೇಕು. ನಿಮ್ಮ ಅಧಿಕಾರ ಇದ್ದಾಗ ನೀವು ಮಾಡುತ್ತಿದ್ದೀರಿ, ಈಗ ಅವರಿಗೆ ಅಧಿಕಾರ ಇದೆ ಅವರು ಮಾಡುತ್ತಿದ್ದಾರೆ. ಒಟ್ಟಾರೆ, ರೈತರಿಗೆ ತೊಂದರೆ ಕೊಡೋದನ್ನು ಯಾರೂ ನಿಲ್ಲಿಸುವುದಿಲ್ಲ. ಆದ್ದರಿಂದ ಯಾವುದೇ ರಾಜಕೀಯ ಪಕ್ಷಗಳೂ ಬಿಡದಿಗೆ ಬರುವುದು ಬೇಡ ಎಂದು ಕಟ್ಟುನಿಟ್ಟಾಗಿ ಜಾಡಿಸಿದರು.ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಮಾತನಾಡಿ, ಇದು ದೇವನಹಳ್ಳಿಯ ಚನ್ನಪಟ್ಟಣದ ರೈತರ ಹೋರಾಟವನ್ನು ನನಗೆ ನೆನಪಿಸುತ್ತದೆ. ಅಲ್ಲಿಯೂ ಹೋರಾಟ ಮಾಡಿ ರೈತರಿಗೆ ಜಯವಾಯಿತು. ಈಗ ಬಿಡದಿ ರೈತರಿಗೆ ಸೋಲಾಗಲು ಬಿಡುವುದಿಲ್ಲ. ನಮ್ಮ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಯಾರಿಗೂ ಬಿಡುವುದಿಲ್ಲ. ನಿಮ್ಮ ಹೋರಾಟದ ಜೊತೆ ನಾನೂ ಇರುತ್ತೇನೆ ಎಂದರು.
ನೀರಾವರಿ ಹೋರಾಟಗಾರ ಲಕ್ಷ್ಮಣ ಹೂಗಾರ ಮಾತನಾಡಿ, ರಾಜ್ಯದ ರೈತರ ಪರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಲ್ಲ. ಅವರು ಮುಖ್ಯಮಂತ್ರಿಯಾಗಿರುವುದಕ್ಕೆ ರಾಮನಗರ ಜಿಲ್ಲೆ ಕಾರಣ, ತಮ್ಮ ಸ್ವಂತ ಜಿಲ್ಲೆಯ ರೈತರಿಗೆ ದ್ರೋಹ ಬಗೆಯಬಾರದು ಎಂದರು.ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಪ್ರಾಣಕೊಟ್ಟರೂ ಬಿಡದಿಯ ಭೂಮಿಯನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ. ಇಡೀ ರಾಜ್ಯದ ರೈತರು ಬಿಡದಿ ರೈತರ ಪರವಾಗಿ ನಿಲ್ಲುತ್ತಾರೆ ಎಂದರು.
ಸಮಾವೇಶದಲ್ಲಿ ಯಾವುದೇ ಕಾನೂನಿನ ತಳಹದಿ ಇಲ್ಲದ ರೈತ ಕೃಷಿ ಪರಿಸರ ವಿರೋಧಿ ಬಿಡದಿ ಟೌನ್ ಶಿಪ್ ಯೋಜನೆ ರದ್ದುಗೊಳಿಸಬೇಕು, ರಾಜ್ಯಸರ್ಕಾರ ಒಂದು ಕಡೆ ಬಲವಂತದ ಭೂ ಸ್ವಾಧೀನ ಮಾಡುವುದಿಲ್ಲ ಎಂದು ಘೋಷಿಸುತ್ತಲೇ, ಇನ್ನೊಂದು ಕಡೆ ಬಲವಂತವಾಗಿ ಭೂ ಸ್ವಾಧೀನ ಮುಂದುವರಿಸುವ ಇಬ್ಬಗೆಯ ನೀತಿ ನಿಲ್ಲಿಸಬೇಕು. ಭೂ ಸ್ವಾಧೀನದ ವಿರುದ್ಧ ಹೋರಾಡುತ್ತಿರುವ ರೈತರ ಮನವಿ ಆಲಿಸಬೇಕು, ಬಿಡದಿ ಟೌನ್ ಶಿಪ್ ಸಮಗ್ರ ಪರಿಶೀಲನಾ ಸಮಿತಿಯಲ್ಲಿ ಕೃಷಿ, ಪರಿಸರ, ಸಾಮಾಜಿಕ ತಜ್ಞರನ್ನು ಸೇರ್ಪಡೆಗೊಳಿಸಬೇಕು ಎಂಬ ಹಕ್ಕೊತ್ತಾಯ ಮಂಡಿಸಲಾಯಿತು.ಪ್ರತಿಭಟನಾ ಸಮಾವೇಶದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹೊನ್ನೂರು ಪ್ರಕಾಶ್, ಚುಕ್ಕಿ ನಂಜುಂಡಸ್ವಾಮಿ, ಶಿವಪ್ರಕಾಶ್, ಬಸವರಾಜ್, ವಿದ್ಯಾರ್ಥಿ ನಾಯಕಿ ಶರಣ್ಯ ಮತ್ತಿತರರು ಹಾಜರಿದ್ದರು.