ಬೀದರ್‌ ಜಿಲ್ಲೆ 9 ಪೊಲೀಸ್‌ ಠಾಣಾ ವ್ಯಾಪ್ತಿ 69 ಬೈಕ್‌ ಕಳುವು ಪತ್ತೆ

| Published : Oct 01 2024, 01:21 AM IST

ಸಾರಾಂಶ

ಬಂಗಾರ, ಬೆಳ್ಳಿ, ಬೈಕ್‌, ಶ್ರೀಗಂಧದ ಮರ ಹಾಗೂ ಜಾನುವಾರು ಕಳುವು, ನೀರಿನ ಪಂಪಸೆಟ್‌ ಅಲ್ಲದೆ ನಗದು ಹಣ ಕಳುವು ಪ್ರಕರಣಗಳಲ್ಲಿ 25 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ಒಟ್ಟು 43.87 ಲಕ್ಷ ರು. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯ ವಿವಿಧ 9 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳೆದ 3 ತಿಂಗಳಿನಲ್ಲಿ ಕಳುವಾದ 69 ಬೈಕ್‌ ಪತ್ತೆ ಹಚ್ಚಿ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದರು.

ಸೋಮವಾರ ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಗಾರ, ಬೆಳ್ಳಿ, ಬೈಕ್‌, ಶ್ರೀಗಂಧದ ಮರ ಹಾಗೂ ಜಾನುವಾರು ಕಳುವು, ನೀರಿನ ಪಂಪಸೆಟ್‌ ಅಲ್ಲದೆ ನಗದು ಹಣ ಕಳುವು ಪ್ರಕರಣಗಳಲ್ಲಿ 25 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ಒಟ್ಟು 43.87 ಲಕ್ಷ ರು. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದರು.

ಹುಮನಾಬಾದ್‌ ಸೇರಿದಂತೆ ಅನೇಕ ಕಡೆಗಳಲ್ಲಿ ಬೈಕ್‌ ಕಳ್ಳರು ನಕಲಿ ಕೀಲಿ ಹಾಗೂ ಸೈಡ್‌ ಲಾಕ್‌ ತೆಗೆದು ಬೈಕ್‌ಗಳನ್ನು ಕಳುವು ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಲಾಗಿದೆ. ಔರಾದ್‌, ಭಾಲ್ಕಿಯಲ್ಲಿ ಕೂಡ ಅನೇಕ ಪ್ರಕರಣಗಳು ದಾಖಲಾಗಿದ್ದವು ಇದಲ್ಲದೇ ಪಕ್ಕದ ಜಹೀರಾಬಾದ್‌ನಲ್ಲಿ ಕೂಡ ಬೈಕ್‌ ಕಳುವು ಮಾಡಿದ್ದರು.

ಹುಮನಾಬಾದ್‌ ಪೊಲೀಸ್‌ ಠಾಣೆಯಡಿಯಲ್ಲಿ 1.88ಲಕ್ಷ ರು. ಮೌಲ್ಯದ ಬಂಗಾರದ ವಸ್ತು ಕಳುವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಭಾಲ್ಕಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 7 ಕೆಜಿ ಶ್ರೀಗಂಧದ ಮರದ ತುಂಡುಗಳ ಕಳ್ಳತನ ಪತ್ತೆ ಹಚ್ಚಲಾಗಿದೆ. ಕಮಲನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 28 ಕುರಿಗಳನ್ನು ಕಳುವು ಮಾಡಿಕೊಂಡು ಹೋಗುತ್ತಿದ್ದವರನ್ನು ಪೊಲೀಸರು ಪತ್ತೆ ಹಚ್ಚಿ 4 ಜನರನ್ನು ಬಂಧಿಸಿದ್ದಾರೆ.

ಔರಾದ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣಗಳನ್ನು ಪತ್ತೆ ಹಚ್ಚಿ 9.29ಲಕ್ಷ ರು. ಮೌಲ್ಯದ ಸ್ವತ್ತು ಪತ್ತೆ ಮಾಡಲಾಗಿ 3 ಜನ ಆರೋಪಿ ಬಂಧಿಸಲಾಗಿದೆ.

ಬೀದರ್‌ನ ಗಾಂಧಿಗಂಜ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 60 ಗ್ರಾಂ ಬಂಗಾರದ ಆಭರಣಗಳು ಅಂದಾಜು 4.2ಲಕ್ಷ ರು. ಮೌಲ್ಯದ ಸ್ವತ್ತು ಪತ್ತೆ ಹಚ್ಚಲಾಗಿದೆ. ಹೀಗೆ ಒಟ್ಟು 34.87ಲಕ್ಷ ರು. ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದು 25 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಮಹೇಶ ಮೇಘಣ್ಣನವರ್‌, ಡಿವೈಎಸ್ಪಿ ಶಿವನಗೌಡ ಪಾಟೀಲ್ ಸೇರಿದಂತೆ ವಿವಿಧ ಠಾಣೆಗಳ ಸಿಪಿಐಗಳು ಇದ್ದರು.