ಅಂಕೇಗೌಡರ ಪುಸ್ತಕ ಪ್ರೇಮಕ್ಕೆ ಮರುಜನ್ಮ ಸಿಕ್ಕಂತಾಗಿದೆ. ಪುಸ್ತಕ ಮನೆ ಸ್ಥಾಪನೆ ಮಾಡಿ 20 ಭಾಷೆಯ ಇಪ್ಪತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿ ವಿಶಿಷ್ಟ ಸಾಧನೆ ಮಾಡಿರುವ ಅಂಕೇಗೌಡ ಈ ಸಾಧನೆ ಮುಂದಿನ ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪದ್ಮಶ್ರೀ ಅಂಕೇಗೌಡರು ಲಕ್ಷಾಂತರ ಪುಸ್ತಕ ಸಂಗ್ರಹಣೆ ಮಾಡುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದೊಂದು ಅಧ್ಯಾಯನ ಕೇಂದ್ರವಾಗುವ ಜೊತೆಗೆ ಸ್ಮಾರಕವಾಗಿ ರೂಪುಗಳಬೇಕಿದೆ ಎಂದು ರಾಜ್ಯ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ಮಾನಸ ಹೇಳಿದರು.ತಾಲೂಕಿನ ಹರಳಹಳ್ಳಿಯಲ್ಲಿ ಇರುವ ಪುಸ್ತಕ ಪ್ರೇಮ ಹಾಗೂ ಪದ್ಮಶ್ರೀ ಪಶಸ್ತಿ ಪುರಸ್ಕೃತ ಎಂ.ಅಂಕೇಗೌಡರ ಪುಸ್ತಕ ಮನೆಗೆ ಆಗಮಿಸಿ ಎಂ.ಅಂಕೇಗೌಡರನ್ನು ಅಭಿನಂದಿಸಿ ಮಾತನಾಡಿ, ಪುಸ್ತಕ ಪರಿಚಾರಕ ಅಂಕೇಗೌಡರಿಗೆ ಪುಸ್ತಕ ಸಂಗ್ರಹಕ್ಕಾಗಿ ಪದ್ಮಶ್ರೀ ನೀಡಿ ಗೌರವಿಸಿರುವುದು ಸ್ವಾಗತರ್ಹ ವಿಚಾರವಾಗಿದೆ ಎಂದರು.
ಅಂಕೇಗೌಡರ ಪುಸ್ತಕ ಪ್ರೇಮಕ್ಕೆ ಮರುಜನ್ಮ ಸಿಕ್ಕಂತಾಗಿದೆ. ಪುಸ್ತಕ ಮನೆ ಸ್ಥಾಪನೆ ಮಾಡಿ 20 ಭಾಷೆಯ ಇಪ್ಪತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿ ವಿಶಿಷ್ಟ ಸಾಧನೆ ಮಾಡಿರುವ ಅಂಕೇಗೌಡ ಈ ಸಾಧನೆ ಮುಂದಿನ ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದರು.ನಾನು ಸಾಕಷ್ಟು ಗ್ರಂಥಾಲಯಗಳನ್ನು ನೋಡಿದ್ದೇವೆ. ಅಲ್ಲಿ ಯಾವ ಪುಸ್ತಕಗಳಿವೆ ಎನ್ನುವುದನ್ನು ನೋಡುತ್ತಿದ್ದೇವು. ಆದರೆ, ಅಂಕೇಗೌಡರ ಪುಸ್ತಕ ಮನೆಯಲ್ಲಿ ಯಾವ ಪುಸ್ತಕ ಇಲ್ಲ ಎನ್ನುವುದನ್ನು ಹುಡುಕಬೇಕಿದೆ ಅಷ್ಟರ ಮಟ್ಟಿಗೆ ಪುಸ್ತಕ ರಾಶಿಗಳಿವೆ ಎಂದು ಬಣ್ಣಿಸಿದರು.
ಪುಸ್ತಕ ಮನೆ ಅಭಿವೃದ್ಧಿಪಡಿಸುವ ವಿಚಾರವಾಗಿ ಅಂಕೇಗೌಡರೊಂದಿಗೆ ಸುಧೀರ್ಘವಾಗಿ ಚರ್ಚಿಸಿದ್ದೇವೆ. ಪುಸ್ತಕಗಳ ಸಂರಕ್ಷಣೆಗೆ ಕ್ರಮವಹಿಸಬೇಕಾಗಿದೆ. ಪುಸ್ತಕ ಮನೆಯನ್ನು ಅಭಿವೃದ್ಧಿ ಪಡಿಸಿ ಸ್ಮರ್ಧಾತ್ಮಕ ವಿದ್ಯಾರ್ಥಿಗಳಿಗೆ ಅಧ್ಯಾಯನ ಕೇಂದ್ರದ ಜೊತೆಗೆ ಇದನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.ಸಾರ್ವಜನಿಕ ಗ್ರಂಥಾಲಯ ಆಯುಕ್ತ ಎಚ್.ಬಸವರಾಜೇಂದ್ರ ಮಾತನಾಡಿ, ಒಬ್ಬ ವ್ಯಕ್ತಿ ಇಷ್ಟೊಂದು ದೊಡ್ಡ ಪ್ರಮಾಣದ ಪುಸ್ತಕಗಳನ್ನು ತನ್ನ ಸ್ವಂತ ಪರಿಶ್ರಮ ಮತ್ತು ಆಸಕ್ತಿಯಿಂದ ಸಂಗ್ರಹ ಮಾಡಿರುವುದು ಅತ್ಯಂತ ಅಚ್ಚರಿಯ ಸಂಗತಿ. ಅವರ ಈ ಸಾಧನೆ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಜ್ಞಾನದ ತಳಹದಿಯ ಮೇಲೆ ದೇವಾಲಯ ಕಟ್ಟುವುದು ಹೇಗೆ ಎಂಬುದನ್ನು ಅಂಕೇಗೌಡರು ತೋರಿಸಿಕೊಟ್ಟಿದ್ದಾರೆ. ನಮ್ಮ ಸರ್ಕಾರದಿಂದ ಹೇಗೆ ಅಭಿವೃದ್ಧಿಪಡಿಸಬೇಕು ಎನ್ನುವ ಕುರಿತು ಚರ್ಚಿಸಿದ್ದೇವೆ. ಇಂತಹ ಪುಸ್ತಕ ಮನೆಯನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ.ಅಂಕೇಗೌಡ ಮಾತನಾಡಿ, ನಾನು ಇಲ್ಲಿಯವರೆಗೆ ಸಂಗ್ರಹಿಸಿಕೊಂಡು ಬಂದಿರುವ ಪುಸ್ತಕದ ಮನೆಯನ್ನು ಒಂದು ಕಮಿಟಿ ಮಾಡಿಕೊಂಡು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡಬೇಕಿದೆ ಎನ್ನುವುದನ್ನು ಅವರೊಟ್ಟಿಗೆ ಚರ್ಚಿಸಿದ್ದೇವೆ. ಅವರು ಸಹ ಕ್ರಮವಹಿಸುವ ಭರವಸೆ ನೀಡಿದ್ದಾರೆ ಎಂದರು.
ಈ ವೇಳೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಹಾಗೂ ರಂಗಕರ್ಮಿ ರಾಜಶೇಖರ ಕದಂಬ, ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ನಾಗವೇಣಿ, ಎಂ.ಮನು, ಲತಾ, ಎಲ್.ನಾರಾಯಣಮೂರ್ತಿ, ರಾಮಣ್ಣ, ತಿಪ್ಪಣ್ಣ ಸೇರಿದಂತೆ ಹಲವರು ಇದ್ದರು.