ಫೆ.7ಕ್ಕೆ ರಾಜ್ಯ ಮಟ್ಟದ ಅರ್ಚಕರ ಬೃಹತ್ ಸಮಾವೇಶ: ಡಾ.ಕೆ.ಎಸ್.ಎನ್.ದೀಕ್ಷಿತ್

| Published : Dec 27 2023, 01:31 AM IST

ಫೆ.7ಕ್ಕೆ ರಾಜ್ಯ ಮಟ್ಟದ ಅರ್ಚಕರ ಬೃಹತ್ ಸಮಾವೇಶ: ಡಾ.ಕೆ.ಎಸ್.ಎನ್.ದೀಕ್ಷಿತ್
Share this Article
  • FB
  • TW
  • Linkdin
  • Email

ಸಾರಾಂಶ

ಅರ್ಚಕರು, ಆಗಮಿಕರಿಗೆ ಪ್ರಸ್ತುತ ನೀಡುತ್ತಿರುವ ತಸ್ತೀಕ್ ಪರಿಷ್ಕರಿಸಿ ಕನಿಷ್ಠ 10 ಸಾವಿರಕ್ಕೆ ಹೆಚ್ಚಳ ಮಾಡುವ ಜೊತೆಗೆ ಅರ್ಚಕರ ಮತ್ತು ದೇವಸ್ಥಾನಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಬೃಹತ್ ಸಮಾವೇಶದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಅರ್ಚಕರ ತಸ್ತೀಕ್ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು 2024ರ ಫೆ.7 ರಂದು ಬೆಳಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ, ಆಗಮಿಕ ಸಂಘದ ಪದಾಧಿಕಾರಿಗಳು ತಿಳಿಸಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸಂಘದ ಮುಖ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್.ಎನ್.ದೀಕ್ಷಿತ್, ಈ ಹಿಂದೆ ರಾಜಮಹಾರಾಜರ ಕಾಲದಲ್ಲಿ ದೇವಸ್ಥಾನಗಳಲ್ಲಿ ಪೂಜೆ ನಡೆಸುವ ಅರ್ಚಕರಿಗೆ ನೀಡಿದ್ದ ಸಾವಿರಾರು ಎಕರೆ ಜಮೀನು ಕೈತಪ್ಪಿ ಹೋಗಿದ್ದರಿಂದ ಅರ್ಚಕರೆಲ್ಲರೂ ಅನಾಥರಾಗಿದ್ದರು ಎಂದರು.

ನಂತರದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಮುಖ್ಯಮಂತ್ರಿಗಳನ್ನು ಬೇಡಿಕೊಂಡು ಹೋರಾಟ ನಡೆಸಿದ ಪ್ರತಿಫಲವಾಗಿ ತಿಂಗಳಿಗೆ 5 ಸಾವಿರ ತಸ್ತೀಕ್ ಸಿಗುತ್ತಿದೆ. ಆದರೆ, ಈ ಹಣದಲ್ಲಿ ಅರ್ಚಕರ ಕುಟುಂಬ ಮತ್ತು ದೇವಸ್ಥಾನದ ಪೂಜಾ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅರ್ಚಕರಿಗೆ ಮೀಸಲಿಟ್ಟಿದ್ದ ಲಕ್ಷಾಂತರ ರು. ಬೆಲೆ ಬಾಳುವ ಜಮೀನನ್ನು ಸರ್ಕಾರ ವಶಕ್ಕೆ ಪಡೆದುಕೊಂಡರೂ ಸಹ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವ ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ನಾವುಗಳು ಇಂದಿಗೂ ನಿಲ್ಲಿಸಿಲ್ಲ ಎಂದರು.

ಸರ್ಕಾರ ನೀಡುತ್ತಿರುವ 5 ಸಾವಿರ ತಸ್ತೀಕ್ ಹಣ ಯಾವುದಕ್ಕೂ ಸಾಲುತ್ತಿಲ್ಲ. 60 ವರ್ಷ ತುಂಬಿದ ಅರ್ಚಕರು ಪೂಜೆ ಮಾಡುವಂತಿಲ್ಲ ಎಂದು ಕಳೆದ 15 ವರ್ಷಗಳ ಹಿಂದೆ ಸರ್ಕಾರ ನಿವೃತ್ತಿ ಘೋಷಣೆ ಮಾಡಿತ್ತು. ಇದಕ್ಕೆ ಸುರ್ಪಿಂ ಕೋರ್ಟ್‌ನ ತಡೆಯಾಜ್ಞೆ ಇರುವುದರಿಂದ ಪೂಜೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದರು.

ಪ್ರಸ್ತುತ ನೀಡುತ್ತಿರುವ ತಸ್ತೀಕ್ ಪರಿಷ್ಕರಿಸಿ ಕನಿಷ್ಠ 10 ಸಾವಿರಕ್ಕೆ ಹೆಚ್ಚಳ ಮಾಡುವ ಜೊತೆಗೆ ಅರ್ಚಕರ ಮತ್ತು ದೇವಸ್ಥಾನಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಬೃಹತ್ ಸಮಾವೇಶದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಸಂಘದ ರಾಜ್ಯಾಧ್ಯಕ್ಷ ಎಂ.ಎಸ್.ವೆಂಕಟಾಚಲಯ್ಯ ಮಾತನಾಡಿ, ಸರ್ಕಾರ ನೀಡುತ್ತಿರುವ 5 ಸಾವಿರ ತಸ್ತೀಕ್ ಹಣವು ದೇವರ ನೈವೇದ್ಯ ಮತ್ತು ಪೂಜಾ ಸಾಮಗ್ರಿಗಳಿಗೆ ಸಾಕಾಗುವುದಿಲ್ಲ. ಇನ್ನು ವರ್ಷವಿಡೀ ನಾವುಗಳು ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ಅರ್ಚಕರ ಬದುಕಿಗೆ ಈ ಹಣ ಸಾಲದೇ ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ಹಾಗಾಗಿ ತಸ್ತೀಕ್ ಹಣ ಹೆಚ್ಚಳ ಮಾಡುವ ಜೊತೆಗೆ ಇನ್ನಿತರೆ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಮೂಲಕ ಅರ್ಚಕರ ನೆರವಿಗೆ ನಿಲ್ಲಬೇಕಿದೆ ಎಂದು ಆಗ್ರಹಿಸಿದರು.

ಸಂಘದ ತಾಲೂಕು ಘಟಕದ ಸಂತೋಷ್‌ಕುಮಾರ್ ಮಾತನಾಡಿ, ಒಂದು ಹಳ್ಳಿ ಸೇರಿದಂತೆ ಇಡೀ ರಾಜ್ಯ ಸುಭಿಕ್ಷವಾಗಿರಬೇಕೆಂದರೆ ಪ್ರತಿಯೊಂದು ದೇವಾಲಯಗಳಲ್ಲಿಯೂ ಸಹ ಸಕಾಲದಲ್ಲಿ ಪೂಜೆ ಪುರಸ್ಕಾರಗಳು ನಡೆಯಬೇಕು. ಆದರೆ ಸರ್ಕಾರ ದೇವಾಲಯಗಳು ಮತ್ತು ಅರ್ಚಕರ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಕನಿಷ್ಠ ಶೇ.10ರಷ್ಟು ಹೆಚ್ಚಳ ಮಾಡಿದರೆ ಶಿಥಿಲಾವಸ್ಥೆಯಲ್ಲಿರುವ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿಸಬಹುದು. ತಸ್ತೀಕ್ ಬದಲು ಗೌರವ ಸಂಭಾವನೆ ರೂಪದಲ್ಲಿ ಅರ್ಚಕರಿಗೆ ಕೊಟ್ಟರೆ ಅನುಕೂಲವಾಗುತ್ತದೆ ಎಂದರು.

2024ರ ಫೆ.7ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಮುಜರಾಯಿ ಹಾಗೂ ಇನ್ನಿತರೆ ಸಚಿವರು ಮತ್ತು ಶಾಸಕರು ಪಾಲ್ಗೊಳ್ಳುವ ಹಿನ್ನಲೆಯಲ್ಲಿ ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಚಕರು ಆಗಮಿಸಬೇಕೆಂದು ಪದಾಧಿಕಾರಿಗಳು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಕೆ.ಶ್ರೀನಿವಾಸಮೂರ್ತಿ ಮಾತನಾಡಿದರು. ಅರ್ಚಕರ ಸಂಘದ ಜಿಲ್ಲೆ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ಇದ್ದರು.