ಧರ್ಮಸ್ಥಳ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ

| N/A | Published : Aug 15 2025, 01:00 AM IST / Updated: Aug 15 2025, 06:19 AM IST

Dk Shivakumar
ಧರ್ಮಸ್ಥಳ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಆಡಳಿತ ಮಂಡಳಿ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದ್ದು, ಈ ವಿಚಾರದಲ್ಲಿ ದಾರಿ ತಪ್ಪಿಸುತ್ತಿರುವವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು :  ಧರ್ಮಸ್ಥಳ ಆಡಳಿತ ಮಂಡಳಿ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದ್ದು, ಈ ವಿಚಾರದಲ್ಲಿ ದಾರಿ ತಪ್ಪಿಸುತ್ತಿರುವವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ಶವ ಪತ್ತೆ ಪ್ರಕರಣ ಖಾಲಿ ಟ್ರಂಕ್‌ನಂತಹ ಪ್ರಕರಣವಾಗಿದ್ದು, ಹೆಚ್ಚು ಸದ್ದು ಮಾಡುತ್ತಿದೆಯಷ್ಟೇ ಎಂದೂ ತೀಕ್ಷ್ಣವಾಗಿ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆದಿದ್ದು, ಅದನ್ನು ಯಾರು ಮಾಡಿದ್ದಾರೆಂದು ಹೇಳುವುದಿಲ್ಲ. ಧರ್ಮಸ್ಥಳ ಆಡಳಿತ ಮಂಡಳಿ ಮೇಲೆ ಕಪ್ಪುಚುಕ್ಕೆ ತರಲು ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಪಿತೂರಿ ಮಾಡಲಾಗಿದೆ. ಧರ್ಮಸ್ಥಳ ಆಡಳಿತ ಮಂಡಳಿಯ ತೇಜೋವಧೆ ಮಾಡಲು, ನೂರಾರು ವರ್ಷಗಳಿಂದ ನಡೆದು ಬಂದಿರುವ ಪರಂಪರೆ ಹಾಳು ಮಾಡಲು ಹೊರಟಿದ್ದಾರೆ. ಅದನ್ನು ನಾವು ಸಹಿಸಲ್ಲ ಎಂದರು.

ಅನಾಮಿಕ ವ್ಯಕ್ತಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರ ಸತ್ಯಾಸತ್ಯತೆ ಅರಿಯಲು ಎಸ್‌ಐಟಿ ರಚಿಸಲಾಯಿತು. ಎಸ್‌ಐಟಿ ಈಗ ತನಿಖೆ ಮಾಡುತ್ತಿದೆ. ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ರೂಪಿಸಿದವರು, ದಾರಿ ತಪ್ಪಿಸಿದವರ ಪತ್ತೆಗೆ ಆಳವಾಗಿ ತನಿಖೆ ನಡೆಸಿ, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಗೃಹ ಇಲಾಖೆ ಕೆಲಸ ಮಾಡುತ್ತಿದೆ. ಧರ್ಮಸ್ಥಳ ಪ್ರಕರಣ ಖಾಲಿ ಟ್ರಂಕ್‌ ಇದ್ದಂತೆ. ಅದು ಜಾಸ್ತಿ ಸದ್ದು ಮಾಡುತ್ತಿದೆಯಷ್ಟೇ ಎಂದು ಹೇಳಿದರು.

ಶಿಕ್ಷೆ ಆಗಲೇಬೇಕು:

ಯಾವುದೇ ಧರ್ಮದ ಭಾವನೆಗೆ ಚ್ಯುತಿ ಬರಬಾರದು, ನಂಬಿಕೆ ಉಳಿಯಬೇಕು ಎಂಬ ಕಾರಣಕ್ಕಾಗಿ ಸರ್ಕಾರ ಕ್ರಮ ಕೈಗೊಂಡಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲೇಬೇಕು. ತಪ್ಪು ಮಾಡಿದವರನ್ನು ರಕ್ಷಿಸಲೂ ಹೋಗುವುದಿಲ್ಲ. ಇನ್ನು, ಏನೂ ಇಲ್ಲದೇ ಸಮಾಜದ ದಾರಿ ತಪ್ಪಿಸುವ ಕೆಲಸ ಈ ಪ್ರಕರಣದಲ್ಲಿ ಆಗಿದೆ. ಅದರ ಅರಿವು ನಮಗಿದೆ. ನಮ್ಮ ಪಕ್ಷ-ಸರ್ಕಾರ ಯಾವ ಸಂದರ್ಭದಲ್ಲೂ ಧರ್ಮಸ್ಥಳ ಸೇರಿ ಯಾವುದೇ ಧಾರ್ಮಿಕ ಕ್ಷೇತ್ರಗಳ ಗೌರವ, ನಂಬಿಕೆ, ಸ್ವಾಭಿಮಾನಕ್ಕೆ ತೊಂದರೆ ಕೊಡಲು ಅವಕಾಶ ನೀಡುವುದಿಲ್ಲ. ನ್ಯಾಯ, ಧರ್ಮವನ್ನು ಸರಿಸಮಾನವಾಗಿ ಕಾಣಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

 ಅನಾಮಿಕ ನೀಡಿದ್ದ ದೂರು ಸುಳ್ಳು ಆಗಿದ್ದರೆ ಆತನ ವಿರುದ್ಧವೇ ಕ್ರಮ: ಪರಂ 

 ವಿಧಾನಸಭೆ :   ಧರ್ಮಸ್ಥಳ ಗ್ರಾಮದ ವಿಚಾರದಲ್ಲಿ ದೂರು ನೀಡಿರುವ ವ್ಯಕ್ತಿ ಹೇಳಿದ್ದು ಸುಳ್ಳು ಎಂದಾದರೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಶವಗಳ ಹುಡುಕಾಟದ ಎಸ್‌ಐಟಿ ತನಿಖೆ ಕುರಿತು ಬಿಜೆಪಿ ಶಾಸಕರ ಆರೋಪಗಳಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿ ಮೇಲೆ ಪದೇ ಪದೆ ಕೇಳಿಬರುತ್ತಿರುವ ಆಪಾದನೆಗಳ ಸತ್ಯಾಸತ್ಯತೆ ಹೊರತರಲು ಎಸ್ಐಟಿ ತನಿಖೆ ನಡೆಸಲಾಗುತ್ತಿದೆಯೇ ಹೊರತು ಇದರ ಹಿಂದೆ ಸರ್ಕಾರಕ್ಕೆ ಬೇರೆ ಯಾವುದೇ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಶವ ಹುಡುಕಾಟ ಪ್ರಕರಣ ಯಾವುದೇ ರಾಜಕೀಯ ತಿರುವು, ಧಾರ್ಮಿಕ ತಿರುವು ತೆಗೆದುಕೊಳ್ಳಬಾರದು. ನಾವು ಯಾವುದೋ ಒತ್ತಡಕ್ಕೆ ಮಣಿದು ಎಸ್‌ಐಟಿ ರಚಿಸಿಲ್ಲ, ಯಾರ ಒತ್ತಡಕ್ಕೆ ಮಣಿಯುವುದೂ ಇಲ್ಲ. ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿ ಮೇಲೆ ಪದೇ ಪದೆ ಎದುರಾಗುತ್ತಿದ್ದ ಆರೋಪಗಳ ಸತ್ಯಾಸತ್ಯತೆ ಅರಿಯಲು, ಇನ್ನು ಮುಂದೆ ಆರೋಪಗಳು ಬಾರದಂತೆ ನೋಡಿಕೊಳ್ಳಲು ಎಸ್‌ಐಟಿ ತನಿಖೆ ಮಾಡಲಾಗುತ್ತಿದೆ ಎಂದರು.ಅನಾಮಿಕ ದೂರುದಾರ ಹೇಳಿದ್ದೆಲ್ಲವನ್ನೂ ಎಸ್‌ಐಟಿ ಕೇಳುತ್ತಿಲ್ಲ. ಸತ್ಯಾಸತ್ಯತೆ ಪರಿಶೀಲಿಸಿ ಮುಂದುವರೆಯುತ್ತಿದೆ. ಇನ್ನು, ಅನಾಮಿಕ ಹೇಳಿರುವುದು ಸುಳ್ಳು ಎಂದು ಸಾಬೀತಾದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ. ಜತೆಗೆ, ಕುತಂತ್ರ ನಡೆದಿದ್ದರೂ ಅದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸರ್ಕಾರ ಸತ್ಯಶೋಧನೆಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೂ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಸರ್ಕಾರ ಏನು ತಪ್ಪು ಮಾಡಿದೆ ಎಂಬುದು ತಿಳಿಯುತ್ತಿಲ್ಲ. ಹಾಗೆಯೇ, ಎಸ್‌ಐಟಿ ಮೇಲೆ ನಾವ್ಯಾರು ಒತ್ತಡ ಹಾಕುತ್ತಿಲ್ಲ. ಈವರೆಗೆ ಎಸ್‌ಐಟಿ ಅಧಿಕಾರಿಗಳಿಗೆ ನಮ್ಮಿಂದ ಒಂದೇ ಒಂದು ದೂರವಾಣಿ ಕರೆಯನ್ನೂ ಮಾಡಿಲ್ಲ. ಜತೆಗೆ, ಆ ವಿಚಾರವಾಗಿ ನಾವ್ಯಾರು ಮಾತನಾಡುತ್ತಿಲ್ಲ ಎಂದು ಸಚಿವರು ತಿಳಿಸಿದರು.

ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿ ಮೇಲೆ ಪದೇ ಪದೆ ಕೇಳಿಬರುತ್ತಿರುವ ಆಪಾದನೆಗಳ ಸತ್ಯಾಸತ್ಯತೆ ಹೊರತರಲು ಎಸ್ಐಟಿ ತನಿಖೆ ನಡೆಸಲಾಗುತ್ತಿದೆಯೇ ಹೊರತು ಇದರ ಹಿಂದೆ ಸರ್ಕಾರಕ್ಕೆ ಬೇರೆ ಯಾವುದೇ ಉದ್ದೇಶ ಇಲ್ಲ. ಎಸ್‌ಐಟಿ ಮೇಲೆ ನಾವ್ಯಾರು ಒತ್ತಡ ಹಾಕುತ್ತಿಲ್ಲ. ಈವರೆಗೆ ಎಸ್‌ಐಟಿ ಅಧಿಕಾರಿಗಳಿಗೆ ನಮ್ಮಿಂದ ಒಂದೇ ಒಂದು ದೂರವಾಣಿ ಕರೆಯನ್ನೂ ಮಾಡಿಲ್ಲ. ಜತೆಗೆ, ಆ ವಿಚಾರವಾಗಿ ನಾವ್ಯಾರು ಮಾತನಾಡುತ್ತಿಲ್ಲ

- ಡಾ। ಜಿ. ಪರಮೇಶ್ವರ್‌, ಗೃಹ ಸಚಿವ

Read more Articles on