ಮಂಡ್ಯ ನಗರದಲ್ಲಿ ದೀಪಾವಳಿ ಪಟಾಕಿ ಭರ್ಜರಿ ಸೇಲ್...!

| Published : Nov 01 2024, 12:01 AM IST

ಸಾರಾಂಶ

ಪ್ರತಿ ಬಾರಿ ಮಕ್ಕಳ ಪಟಾಕಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತಿತ್ತು. ಈ ಬಾರಿ ಮಕ್ಕಳ ಪಟಾಕಿಗಳ ಜೊತೆಗೆ ಇತರೆ ಪಟಾಕಿಗಳಿಗೂ ಭಾರೀ ಡಿಮ್ಯಾಂಡ್ ಕೇಳಿಬರುತ್ತಿದೆ. ಮಕ್ಕಳ ಜೊತೆಗೆ ಯುವಕರೂ ಪಟಾಕಿ ಸಿಡಿಸುವುದಕ್ಕೆ ಮುಂದಾಗಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಪಟಾಕಿಗಳ ಆಕರ್ಷಣೆಯಿಂದ ಜನರು ದೂರವಾಗುತ್ತಿದ್ದಾರೆಂಬ ಭಾವನೆ ಇತ್ತೀಚಿನ ಕೆಲವು ವರ್ಷಗಳಿಂದ ಮೂಡಿತ್ತಾದರೂ ಈ ವರ್ಷ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಭರ್ಜರಿಯಾಗೇ ನಡೆದಿದೆ. ಪಟಾಕಿಗಳನ್ನು ಜನರು ಮುಗಿಬಿದ್ದು ಕೊಂಡುಕೊಳ್ಳುತ್ತಿರುವ ದೃಶ್ಯ ನಗರದಲ್ಲಿ ಕಂಡುಬರುತ್ತಿರುವುದು ಅಚ್ಚರಿಗೂ ಕಾರಣವಾಗಿದೆ.

ದೀಪಾವಳಿ ಹಬ್ಬಕ್ಕೂ ಮುನ್ನ ಹಲವು ಸಂಘಟನೆಗಳು ಪ್ರತಿ ವರ್ಷ ‘ಪಟಾಕಿ- ಬಿಟ್ಹಾಕಿ’ ಅಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಪಟಾಕಿಯನ್ನೇ ನಿಷೇಧಿಸುವಂತೆ ಹಲವರು ಸರ್ಕಾರಗಳ ಮೇಲೆ ಒತ್ತಾಯವನ್ನು ತಂದಿದ್ದರು. ಆದರೆ, ಜನರು ಮಾತ್ರ ಪರಿಸರ ಕಾಳಜಿ, ಪಟಾಕಿ ದುಷ್ಪರಿಣಾಮಗಳನ್ನು ಗಣನೆಗೇ ತೆಗೆದುಕೊಳ್ಳದೆ ಬಾಕ್ಸ್‌ಗಟ್ಟಲೆ ಪಟಾಕಿಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು.

೧೫ ಮಳಿಗೆಗಳಲ್ಲಿ ಮಾರಾಟ:

ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಪಟಾಕಿಗಳ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಮಾರಾಟಗಾರರು ಸುಮಾರು ೧೫ ಮಳಿಗೆಗಳಲ್ಲಿ ಪಟಾಕಿಗಳನ್ನಿಟ್ಟುಕೊಂಡು ಮಾರಾಟದಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ದೀಪಾವಳಿ ಹಬ್ಬದ ಕೊನೆಯ ದಿನ ಪಟಾಕಿಗೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿತ್ತು. ಆದರೆ, ಈ ಬಾರಿ ಹಬ್ಬದ ಮುನ್ನಾ ದಿನದಂದಲೇ ಸಾರ್ವಜನಿಕರು ಪಟಾಕಿ ಖರೀದಿಗೆ ಮುಂದಾಗಿರುವುದರಿಂದ ಈ ವರ್ಷ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಪ್ರತಿ ಬಾರಿ ಮಕ್ಕಳ ಪಟಾಕಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತಿತ್ತು. ಈ ಬಾರಿ ಮಕ್ಕಳ ಪಟಾಕಿಗಳ ಜೊತೆಗೆ ಇತರೆ ಪಟಾಕಿಗಳಿಗೂ ಭಾರೀ ಡಿಮ್ಯಾಂಡ್ ಕೇಳಿಬರುತ್ತಿದೆ. ಮಕ್ಕಳ ಜೊತೆಗೆ ಯುವಕರೂ ಪಟಾಕಿ ಸಿಡಿಸುವುದಕ್ಕೆ ಮುಂದಾಗಿದ್ದಾರೆ.

ಜೈನರಿಂದಲೂ ಹೆಚ್ಚು ಖರೀದಿ:

ದೀಪಾವಳಿ ಸಮಯದಲ್ಲಿ ಜೈನ ಸಮುದಾಯದವರಿಂದ ಪಟಾಕಿಗೆ ಹೆಚ್ಚು ಬೇಡಿಕೆ ಇರುತ್ತದೆ. ಚಿನ್ನದ ಬೆಲೆ ಗಗನಮುಖಿಯಾದಂತೆಲ್ಲಾ ಹೆಚ್ಚು ಲಾಭ ಗಳಿಸಿರುವ ಖುಷಿಯಲ್ಲಿರುವ ಜೈನರು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಪಟಾಕಿಗಳನ್ನು ಹೆಚ್ಚು ಖರೀದಿಸುವುದರೊಂದಿಗೆ ಸಮುದಾಯದವರ ಜೊತೆಗೂಡಿ ಕುಟುಂಬ ಸಮೇತರಾಗಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಫ್ಯಾನ್ಸಿ ಪಟಾಕಿಗಳಿಗೂ ಭರ್ಜರಿ ಬೇಡಿಕೆ ಇದ್ದು, ಖರೀದಿಗೆ ಜೈನ ಸಮುದಾಯದವರು ಹೆಚ್ಚು ಆಸಕ್ತಿ ತೋರುತ್ತಿದ್ದುದು ಕಂಡುಬಂದಿತು.

ಹೊಸ ವಿನ್ಯಾಸದ ಪಟಾಕಿಗಳ ಆಕರ್ಷಣೆ:

ಈ ಬಾರಿ ನವೀನ ಮಾದರಿಯ ಹೊಸ ವಿನ್ಯಾಸದ ಹಲವಾರು ಪಟಾಕಿಗಳು ಜನರ ಗಮನಸೆಳೆಯುತ್ತಿವೆ. ಕತ್ತಿ, ಡ್ರೋನ್, ಹೆಲಿಕಾಪ್ಟರ್, ನವಿಲು ಪಟಾಕಿ ಸೇರಿದಂತೆ ಹಲವಾರು ಪಟಾಕಿಗಳು ಸೇರಿವೆ. ಬಾಹುಬಲಿ ಸಿನಿಮಾದ ಕತ್ತಿಯಂತಹ ಪಟಾಕಿ ಹಚ್ಚಿದರೆ ೧೫ ಮೀಟರ್ ಎತ್ತರಕ್ಕೆ ವೇಗವಾಗಿ ಚಿಮ್ಮುವಂತೆ ವಿನ್ಯಾಸಗೊಂಡಿವೆ. ಡ್ರೋನ್ ಮತ್ತು ಹೆಲಿಕಾಪ್ಟರ್ ಪಟಾಕಿಗಳನ್ನೂ ಅತ್ಯಾಕರ್ಷಕವಾಗಿ ಮೂಡುವಂತೆ ಮಾಡಲಾಗಿದೆ. ಮಕ್ಕಳಿಗಾಗಿ ೧೫ ಮಾದರಿಯ ಹೊಸ ವಿನ್ಯಾಸದ ಪಟಾಕಿಗಳನ್ನು ತಯಾರಿಸಲಾಗಿದೆ. ಮಕ್ಕಳನ್ನು ಸೆಳೆಯುವುದಕ್ಕಾಗಿ ಪಟಾಕಿ ಮತ್ತು ಪಟಾಕಿ ಬಾಕ್ಸ್‌ಗಳ ಮೇಲೆ ಮೋಟು- ಪಟ್ಲು ಸೇರಿದಂತೆ ಕಾರ್ಟೂನ್ ಮಾದರಿಯ ಹಲವಾರು ಪಟಾಕಿಗಳು ಮಾರುಕಟ್ಟೆಗೆ ಬಂದಿರುವುದರಿಂದ ಅವುಗಳಿಗೂ ಬೇಡಿಕೆ ಹೆಚ್ಚಿದೆ.

ಮಳೆ ಬಿಡುವು:

ಸಾಮಾನ್ಯವಾಗಿ ದೀಪಾವಳಿ ಹಬ್ಬದ ಸಮಯಕ್ಕೆ ಜಿಟಿ ಮಳೆ ಎದುರಾಗುತ್ತಿತ್ತು. ಆದರೆ, ಈ ವರ್ಷ ಮಳೆಯ ಭೀತಿ ಇಲ್ಲದಿರುವುದು ಮಾರಾಟಗಾರರಿಗೆ ಮತ್ತು ಜನರಿಗೂ ಪಟಾಕಿ ಸಿಡಿಸುವುದಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಟ್ಟಿದೆ. ಈ ಕಾರಣದಿಂದಲೂ ಪಟಾಕಿಗೆ ಬೇಡಿಕೆ ಹೆಚ್ಚಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ದೊಡ್ಡವರಿಗೆ ಪಟಾಕಿಯ ಬಗ್ಗೆ ಕ್ರೇಜ್ ಇಲ್ಲದಿದ್ದರೂ ಮಕ್ಕಳ ಬಲವಂತಕ್ಕೆ ಪಟಾಕಿಯನ್ನು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಯುವಕರೂ ಪಟಾಕಿಗಳ ಆಕರ್ಷಣೆಗಳ ಒಳಗಾಗಿ ಹೆಚ್ಚು ಪಟಾಕಿಗಳ ಖರೀದಿಗೆ ಮುಂದಾಗಿದ್ದರು.

ಹಸಿರು ಪಟಾಕಿಗಳು ಎಲ್ಲಿವೆ?:

ದೀಪಾವಳಿ ಹಬ್ಬದ ಸಮಯದಲ್ಲಿ ಹಸಿರು ಪಟಾಕಿಯನ್ನೇ ಸಿಡಿಸಬೇಕು ಎಂದು ರಾಜ್ಯಸರ್ಕಾರ ಆದೇಶ ಹೊರಡಿಸುತ್ತಲೇ ಇದೆ. ವಾಸ್ತವದಲ್ಲಿ ಹಸಿರು ಪಟಾಕಿಯ ವ್ಯಾಖ್ಯಾನವೇ ಜನರಿಗೆ ಗೊತ್ತಿಲ್ಲ. ಹಾಗಾಗಿ ಹಸಿರು ಪಟಾಕಿ ಎನ್ನುವುದೇ ಹಾಸ್ಯಾಸ್ಪದವೆನಿಸಿದೆ. ಪಟಾಕಿ ಖರೀದಿಸುವಾಗಲೂ ಜನರು ಸಹಜವಾಗಿಯೇ ಪಟಾಕಿಗಳನ್ನು ಆಯ್ದುಕೊಳ್ಳುತ್ತಿದ್ದಾರೆಯೇ ವಿನಃ ಹಸಿರು ಪಟಾಕಿ ಕೊಡಿ ಎಂದು ಯಾರೂ ಮಾರಾಟಗಾರರ ಬಳಿ ಕೇಳುತ್ತಿಲ್ಲ. ಜೊತೆಗೆ ಹಸಿರು ಪಟಾಕಿಗಳನ್ನು ಮಾರಾಟಗಾರರು ಪ್ರತ್ಯೇಕವಾಗೇನೂ ಇಟ್ಟಿಲ್ಲ. ಮಳಿಗೆಗಳಲ್ಲಿ ಹಸಿರು ಪಟಾಕಿಗಳನ್ನು ಗುರುತಿಸುವುದೂ ಕಷ್ಟವೇ ಆಗಿದೆ. ಗ್ರೀನ್ ಫೈರ್ ವರ್ಕ್ಸ್ ಎಂಬ ಲೇಬಲ್ ಇದ್ದರೂ ಒಳಗಡೆ ಮಾಮೂಲಿ ಪಟಾಕಿಗಳೇ ಇರುವುದನ್ನು ಕಾಣಬಹುದಾಗಿದೆ.

ಪಟಾಕಿಗಳ ಬೆಲೆಯಲ್ಲಿ ಶೇ.೨೦ರಷ್ಟು ಹೆಚ್ಚಳ:

ಪ್ರತಿ ವರ್ಷ ಪಟಾಕಿಗಳ ಬೆಲೆ ಶೇ.೧೫ ರಿಂದ ೨೦ರಷ್ಟು ಏರಿಕೆಯಾಗುತ್ತಲೇ ಇದೆ. ಅದೇ ರೀತಿ ಈ ಬಾರಿಯೂ ಪಟಾಕಿಗಳ ಬೆಲೆಯಲ್ಲಿ ಶೇ.೨೦ರಷ್ಟು ಏರಿಕೆಯಾಗಿದೆ. ಬೆಲೆ ಹೆಚ್ಚಳವಾಗಿದ್ದರೂ ಪಟಾಕಿಗಳನ್ನು ಖರೀದಿ ಭರ್ಜರಿಯಾಗಿಯೇ ನಡೆದಿದೆ. ಕನಿಷ್ಠ ೩೦೦ ರು. ನಿಂದ ೪೦೦೦ ರು.ವರೆಗೆ ಬಾಕ್ಸ್ ಪಟಾಕಿಗಳು ಮಾರಾಟವಾಗುತ್ತಿವೆ. ಆಗಸದಲ್ಲಿ ಸಿಡಿಯುವಂತಹ ವೈವಿಧ್ಯಮಯ ಬಣ್ಣ ಬಣ್ಣದ ಚಿತ್ತಾರದ ಪಟಾಕಿಗಳು ೧೦೦೦ ರು.ನಿಂದ ೫ ಸಾವಿರ ರು.ವರೆಗೂ ಮಾರಾಟವಾಗುತ್ತಿದ್ದವು. ಬಿಡಿ ಪಟಾಕಿಗಳನ್ನು ಕೊಳ್ಳುವವರ ಸಂಖ್ಯೆ ವಿರಳವಾಗಿತ್ತು. ಬೆಲೆ ಹೆಚ್ಚೆಂಬ ಕಾರಣಕ್ಕೆ ಬಿಡಿ ಪಟಾಕಿಗಳಿಗಿಂತ ಬಾಕ್ಸ್ ಪಟಾಕಿಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೊರೆ ಹೋಗಿದ್ದರು.‘ನಾವು ನಾಲ್ಕು ವರ್ಷಗಳಿಂದ ಪಟಾಕಿ ವ್ಯಾಪಾರ ಮಾಡುತ್ತಿದ್ದೇವೆ. ಪಟಾಕಿ ಬೆಲೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಅದರಂತೆ ಈ ಬಾರಿಯೂ ಶೇ.೨೦ರಷ್ಟು ಹೆಚ್ಚಳವಾಗಿದೆ. ಪಟಾಕಿಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಕೇಳಿಬರುತ್ತಿದೆ. ಜನರು ಖುಷಿಯಿಂದಲೇ ಪಟಾಕಿ ಖರೀದಿಯಲ್ಲಿ ತೊಡಗಿದ್ದಾರೆ. ಹಸಿರು ಪಟಾಕಿಗಳನ್ನು ಯಾರೂ ಕೇಳುವುದಿಲ್ಲ. ಸಾಮಾನ್ಯ ಪಟಾಕಿಗಳನ್ನೇ ಖರೀದಿಸುತ್ತಿದ್ದಾರೆ.’

- ಲೋಕೇಶ್, ಪಟಾಕಿ ಮಾರಾಟಗಾರ, ಮಂಡ್ಯ