ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಡಿ.26 ಹಾಗೂ 27ರಂದು ಗಾಂಧಿ ಭಾರತ ಕಾರ್ಯಕ್ರಮ ಅಂಗವಾಗಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಹಾಗೂ ಬೃಹತ್ ಸಾರ್ವಜನಿಕ ಸಭೆ ಮಾಡಲಾಗುವುದು. ಇಡೀ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.ಟಿಳಕವಾಡಿಯ ವೀರಸೌಧದ ವೀಕ್ಷಣೆ ಬಳಿಕ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಾಂಧಿ ಭಾರತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಮಹಾತ್ಮ ಗಾಂಧೀಜಿ ಅವರು ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಲು ಕಾಂಗ್ರೆಸ್ ಅಧ್ಯಕ್ಷ ಜವಾಬ್ದಾರಿಯನ್ನು ಸ್ವೀಕರಿಸಿದ ಬೆಳಗಾವಿ ಅಧಿವೇಶನಕ್ಕೆ ನೂರು ವರ್ಷಗಳಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ನಾವೆಲ್ಲರೂ ಇದರ ಫಲವನ್ನು ಅನುಭವಿಸುತ್ತಿದ್ದು, ಈಗ ಶತಮಾನೋತ್ಸವದ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದರು.ನೂರು ವರ್ಷದ ಈ ಸಂಭ್ರಮವನ್ನು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಭಾರತ ಎಂಬ ಕಾರ್ಯಕ್ರಮದ ಅಡಿ ವರ್ಷಪೂರ್ತಿ ಆಚರಣೆಗೆ ಮುಂದಾಗಿದ್ದೇವೆ. ಗಾಂಧಿ ಭಾರತದ ಚಿಹ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣ ಮಾಡಿದ್ದಾರೆ. ನೂರು ವರ್ಷದ ಹಿಂದೆ ಮಹಾತ್ಮಾ ಗಾಂಧೀಜಿ ಅವರು ಅಲಂಕರಿಸಿದ ಸ್ಥಾನದಲ್ಲಿ ಈಗ ನಮ್ಮದೇ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನೋತ್ಸವ ತುಂಬಿದ ಹಿನ್ನೆಲೆಯಲ್ಲಿ ಡಿ.26 ಹಾಗೂ 27ರಂದು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಹಾಗೂ ಬೃಹತ್ ಸಾರ್ವಜನಿಕ ಸಭೆ ನಡೆಸಲಾಗುವುದು. ಗಾಂಧೀಜಿ ಅವರು ಬಂದು ಹೋಗಿದ್ದ ಸ್ಥಳಗಳಿಗೆ ಭೇಟಿ ನೀಡಲಾಗುವುದು ಎಂದರು.ಎಲ್ಲೆಲ್ಲಿ ಸಭೆ ಮಾಡಬಹುದು ಎಂದು ಮೂರ್ನಾಲ್ಕು ಜಾಗಗಳನ್ನು ನಾವು ಗುರುತಿಸುತ್ತಿದ್ದೇವೆ. ನಾಳೆ ನಾಡಿದ್ದು ನಮ್ಮ ರಾಷ್ಟ್ರೀಯ ನಾಯಕರು ಕಾರ್ಯಕ್ರಮದ ಸ್ಥಳಕ್ಕೆ ಬಂದು ಭೇಟಿ ನೀಡಿ, ಪರಿಶೀಲನೆ ಮಾಡಲಿದ್ದಾರೆ. ಈ ಕಾರ್ಯಕ್ರಮಗಳ ರೂಪುರೇಷೆ ಮಾಡಲು ಎಚ್.ಕೆ ಪಾಟೀಲ್, ವೀರಪ್ಪ ಮೋಯ್ಲಿ ಹಾಗೂ ಬಿ.ಎಲ್.ಶಂಕರ್ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಗಮಿಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಬಂದು ಭಾಷಣ ಮಾಡುವ ಆಲೋಚನೆ ಇತ್ತು. ಸಮಯ ಹಾಗೂ ಭದ್ರತೆ ವಿಚಾರಗಳಿವೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಗಾಂಧಿ ಭವನಕ್ಕೆ ಭೇಟಿ:ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಯ ಪೂರ್ವಸಿದ್ಧತೆಗಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿಯ ಪೀರನವಾಡಿಯಲ್ಲಿರುವ ಗಾಂಧಿ ಭವನ, ನಗರದ ಟಿಳಕವಾಡಿಯಲ್ಲಿರುವ ವೀರಸೌಧ ಮತ್ತು ರಾಮತೀರ್ಥ ನಗರದ ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಬಳಿಕ ನಗರದ ಸಿಪಿಎಡ್ ಮೈದಾನವನ್ನು ಪರಿಶೀಲಿಸಿದರು.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ಆಸಿಫ್(ರಾಜು) ಸೇಠ್, ಮಾಜಿ ಶಾಸಕಿ ಅಂಜಲಿ ನಿಂಬಾಳಕರ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿನಯ ನಾವಲಗಟ್ಟಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮತ್ತಿತರರು ಉಪಸ್ಥಿತರಿದ್ದರು.