ಸಾರಾಂಶ
ಆರ್. ಧ್ರುವನಾರಾಯಣ್ ಅವರು ಈ ಭಾಗದಲ್ಲಿ 2 ಅವಧಿಗೆ ಸಂಸದರಾಗಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ. ಆರ್. ಧ್ರುವನಾರಾಯಣ್ ಅವರ ಹುಟ್ಟುಹಬ್ಬದ ಸ್ಮರಣಾರ್ಥದ ಅಂಗವಾಗಿ ಜು. 31ರಂದು ಪಟ್ಟಣದ ಮಂಗಳ ಮಂಟಪದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹೇಳಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮುಂಭಾಗ ಉದ್ಯೋಗ ಮೇಳದ ಪ್ರಚಾರ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರ್. ಧ್ರುವನಾರಾಯಣ್ ಅವರು ಈ ಭಾಗದಲ್ಲಿ 2 ಅವಧಿಗೆ ಸಂಸದರಾಗಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಜೊತೆಗೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕವನ್ನು ಹೊಂದುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಆದ್ದರಿಂದಲೇ ಅವರಿಗೆ ಈ ಕ್ಷೇತ್ರದ ಜನರಿಗೆ ಸೇವೆ ಒದಗಿಸುವ ಹಂಬಲದೊಂದಿಗೆ ಚುನಾವಣೆಗೂ ತಯಾರಿ ನಡೆಸಿದ್ದರು. ಅವರ ಆಸೆಯಂತೆ ತಾಲೂಕಿನ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.ಉದ್ಯೋಗ ಮೇಳದಲ್ಲಿ ಸುಮಾರು ನೂರಾರು ಹೆಸರಾಂತ ಕಂಪನಿಗಳು ಭಾಗವಹಿಸಲಿದ್ದು, ನಿಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಸ್ಥಳದಲ್ಲೇ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಪದವೀಧರರು ಮತ್ತು ಯುವಕರು, ಉದ್ಯೋಗದ ಆಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಹಳ್ಳಿಗಳಲ್ಲೂ ಕೂಡ ಪ್ರಚಾರ ನಡೆಸಲು ಈ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದೆ ಎಂದರು.
ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಮಾಜಿ ನಗರಸಭಾ ಉಪಾಧ್ಯಕ್ಷ ದೊರೆಸ್ವಾಮಿ, ಮುಖಂಡರಾದ ಎನ್.ಎಂ. ಮಂಜುನಾಥ್, ಪುಟ್ಟಸ್ವಾಮಿ, ಶ್ರೀಧರ್, ರಂಗಸ್ವಾಮಿ, ನಾಗೇಶ್, ನಾಗರಾಜು, ಮಹೇಂದ್ರ, ಗೋವಿಂದರಾಜು, ಬಾಲು, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಇದ್ದರು.