ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಹಿತದೃಷ್ಟಿಯಿಂದ ಕಸ್ತೂರಿರಂಗನ್ ವರದಿ ಪರಿಷ್ಕರಿಸಿ ಕೇರಳ ಮಾದರಿಯಲ್ಲಿ ಜಾರಿಗೊಳಿಸುವಂತೆ ಆಗ್ರಹಿಸಿ ವರದಿಯ ಅಧಿಸೂಚನೆಯನ್ನು ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯ ವತಿಯಿಂದ ಸೆ.5 ರಂದು ಉಂಟೂರುಕಟ್ಟೆ ಕೈಮರದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಜಿಲ್ಲಾ ರೈತ ಸಹಕಾರಿ ವೇದಿಕೆ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಆರ್.ಎಂ. ಮಂಜುನಾಥಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಹಿತದೃಷ್ಟಿಯಿಂದ ಕಸ್ತೂರಿರಂಗನ್ ವರದಿ ಪರಿಷ್ಕರಿಸಿ ಕೇರಳ ಮಾದರಿಯಲ್ಲಿ ಜಾರಿಗೊಳಿಸುವಂತೆ ಆಗ್ರಹಿಸಿ ವರದಿಯ ಅಧಿಸೂಚನೆಯನ್ನು ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯ ವತಿಯಿಂದ ಸೆ.5 ರಂದು ಉಂಟೂರುಕಟ್ಟೆ ಕೈಮರದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಜಿಲ್ಲಾ ರೈತ ಸಹಕಾರಿ ವೇದಿಕೆ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಆರ್.ಎಂ. ಮಂಜುನಾಥಗೌಡ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರದಿ ತಿರಸ್ಕಾರಕ್ಕೆ ಅವಕಾಶ ಇಲ್ಲವಾದರೂ ಪರಿಷ್ಕರಣೆ ಮಾಡಬಹುದು. ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಯಥಾವತ್ತಾಗಿ ಜಾರಿಗೊಳಿಸಿದಲ್ಲಿ ತಾಲೂಕಿನ 157 ಗ್ರಾಮಗಳ ಜನರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಅತ್ಯಂತ ಗಂಭೀರವಾದ ವರದಿಯ ಕುರಿತಂತೆ ತಳಮಟ್ಟದಲ್ಲಿ ಚರ್ಚಿಸದೇ ಜನರ ಅಭಿಪ್ರಾಯವನ್ನೂ ಪಡೆಯದೇ ಅಧಿಸೂಚನೆ ಹೊರಡಿಸಿರುವುದು ಜನವಿರೋಧಿ ನೀತಿಯಾಗಿದೆ. ಈ ಬಗ್ಗೆ ಆರು ಬಾರಿ ವರದಿಯನ್ನು ವಿರೋಧಿಸಿ ಆಕ್ಷೇಪಣೆ ಸಲ್ಲಿಸಿದ್ದರೂ ಏಳನೇ ಬಾರಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಈ ಭಾಗದಲ್ಲಿ ಬದುಕನ್ನು ಕಟ್ಟಿಕೊಂಡವರ ಭವಿಷ್ಯದ ಜತೆಗೆ ಪರಿಸರವೂ ಉಳಿಯಬೇಕಿದೆ. ಈ ವರದಿ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸುವ ಬಗ್ಗೆ ಡಿಸಿಸಿ ಬ್ಯಾಂಕಿನ ಸಭೆಯಲ್ಲೂ ನಿರ್ಣಯ ಕೈಗೊಂಡಿರುವ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಸಂಘಟನೆ ರಾಜಕೀಯ ಪಕ್ಷಗಳಿಂದ ಹೊರತಾಗಿದ್ದು, ರಾಜಕೀಯ ಹಿತಾಸಕ್ತಿಯೂ ಇಲ್ಲಾ. ಪಕ್ಷಭೇದ ಮರೆತು ಈ ವರದಿ ವಿರೋಧಿಸಬೇಕಿದೆ ಎಂದು ಹೇಳಿದರು.

ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮಾಡಿರುವ ಮನವಿಯ ಆಧಾರದಲ್ಲಿ ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ಶೀಘ್ರದಲ್ಲಿ ಒಂದು ದಿನ ಅಧಿವೇಶನ ಕರೆಯುವ ಭರವಸೆ ನೀಡಿದ್ದು, ಅಧಿವೇಶನದ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಆಶಾಭಾವನೆ ಹೊಂದಿರುವುದಾಗಿ ತಿಳಿಸಿ ನಜಿಲ್ಲೆಯಾದ್ಯಂತ ಜನಜಾಗೃತಿ ಮೂಡಿಸುವ ಸಲುವಾಗಿ ಗುರುವಾರ ಸಾಗರ ತಾಲೂಕಿನ ಆವಿನಹಳ್ಳಿಯಿಂದ ಸಾಗರದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಈ ವರದಿಯ ಪರಿಷ್ಕರಣೆಗೆ ಆಕ್ಷೇಪಣೆ ಸಲ್ಲಿಸಲು ಆಪ್ ಸಿದ್ಧಗೊಳಿಸಲಾಗಿದ್ದು ಜನರು ಪೂರ್ಣ ವಿವರಗಳೊಂದಿಗೆ ಇಂಗ್ಲೀಷ್ ಮತ್ತು ಕನ್ನಡದಲ್ಲಿರುವ ಈ ಆಪ್ ಮೂಲಕ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಬಹುದು. ಸೆ.5 ರಂದು ಉಂಟೂರುಕಟ್ಟೆ ಕೈಮರದ ರಕ್ತೇಶ್ವರಿ ದೇವಸ್ಥಾನದಿಂದ ಬೆಳಗ್ಗೆ 9ಕ್ಕೆ ಪಾದಯಾತ್ರೆ ಆರಂಭವಾಗಲಿದ್ದು, 11ಕ್ಕೆ ತಾಲೂಕು ಕಚೇರಿ ಎದುರು ಸಭೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸಹಕಾರಿ ಮುಖಂಡರು ಇದರಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ವೇದಿಕೆಯ ತಾಲೂಕು ಅಧ್ಯಕ್ಷ ಎಚ್.ಎನ್. ವಿಜಯದೇವ್, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ಟಿ.ಎಲ್. ಸುಂದರೇಶ್, ಎಚ್.ಬಿ. ಪದ್ಮನಾಭ್‌, ಬಿ.ಆರ್. ರಾಘವೇಂದ್ರ ಶೆಟ್ಟಿ, ಶಶಾಂಕ್ ಹೆಗ್ಡೆ, ರಹಮತ್ ಉಲ್ಲಾ ಅಸಾದಿ, ಕಟ್ಟೆಹಕ್ಕಲು ಕಿರಣ್, ಶಶಿಧರ್ ಇತರರು ಇದ್ದರು.