ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಶಾಖಾ ಅಂಚೆ ಕಚೇರಿ ಆಗಿರುವ ಬಿಳಿಗಿರಿ ರಂಗನಬೆಟ್ಟದ ಅಂಚೆ ಕಚೇರಿಯನ್ನು ಉಪ ಅಂಚೆ ಕಚೇರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಭರವಸೆ ನೀಡಿದರು. ಬಿಳಿಗಿರಿ ರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ನಂಜನಗೂಡು ಅಂಚೆ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ಅಂತ್ಯೋದಯ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಚೆ ಇಲಾಖೆಯು ಸಮಾಜದ ಎಲ್ಲಾ ರೀತಿಯ ಜನರಿಗೆ ಸಮಾನವಾದ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು. ಪ್ರಾಸ್ತವಿಕವಾಗಿ ಮಾತನಾಡಿದ ದಕ್ಷಿಣ ಕರ್ನಾಟಕ ಅಂಚೆ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಂದ್ರಶೇಖರ್ ಕಾಕುಮನು ಅವರು, ಅಂಚೆ ಇಲಾಖೆಯಲ್ಲಿ ಹಲವು ಜನಪರವಾದ ಉಳಿತಾಯ ಯೋಜನೆಗಳಿದ್ದು ಅವುಗಳ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು.
ನಮ್ಮ ಅಂಚೆ ಇಲಾಖೆಯ ಯೋಜನೆಗಳು ಎಷ್ಟರ ಮಟ್ಟಿಗೆ ನಿಮಗೆ ತಲುಪಿವೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು. ಅಂಚೆ ಕಚೇರಿಗಳು ಭಾರತ ಸರ್ಕಾರದ ಪ್ರಮುಖ ಕೇಂದ್ರಗಳಾಗಿದ್ದು, ನಿಮ್ಮ ಊರಿನಲ್ಲಿರುವ ಅಂಚೆ ಕಚೇರಿ ಎಷ್ಟರ ಮಟ್ಟಿಗೆ ನಿಮಗೆ ತಲುಪಿದೆ ಎಂಬುದನ್ನು ತಿಳಿದುಕೊಳ್ಳುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು. ದಕ್ಷಿಣ ಕರ್ನಾಟಕ ಅಂಚೆ ವಲಯದ ನಿರ್ದೇಶಕ ಸಂದೇಶ್ ಮಹದೇವಪ್ಪ ಅಂಚೆ ಕಚೇರಿಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು. ಚಾಮರಾಜನಗರ ಜಿಲ್ಲಾ ಬುಡಕಟ್ಟು ಮತ್ತು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಮಾದೇಗೌಡ ಕೇಂದ್ರ ಸರ್ಕಾರದ ಭದ್ರತೆ ಇರುವುದರಿಂದ ಅಂಚೆ ಇಲಾಖೆಯಲ್ಲಿ ತೊಡಗಿಸುವ ಹಣಕ್ಕೆ ರಕ್ಷಣೆ ಇರುತ್ತದೆ ಎಂದರು.ಸೋಲಿಗ ಬುಡಕಟ್ಟುಗಳಿಗೆ ಸೇರಿದ ಜನರಿಗೆ ಸಾಂಕೇತಿಕವಾಗಿ ಉಳಿತಾಯ ಖಾತೆಯ ಪಾಸ್‌ಬುಕ್ ಮತ್ತು ಗ್ರಾಮೀಣ ಅಂಚೆ ಜೀವಿಮೆಯ ಬಾಂಡ್‌ಗಳನ್ನು ವಿತರಿಸಲಾಯಿತು. ಉಳಿತಾಯ ಖಾತೆಗಳು ಮತ್ತು ಗ್ರಾಮೀಣ ಅಂಚೆ ಜೀವ ವಿಮೆಯ ಮೊದಲ ಕಂತಿನ ಹಣವನ್ನು ಅಂಚೆ ಇಲಾಖೆ ಸಿಬ್ಬಂದಿ ಮಂಜುನಾಥ್, ವಸುಂದರ, ಹರವೆ ಮಹದೇವಸ್ವಾಮಿ, ಎಸ್. ಶ್ರೀನಿವಾಸ್ ಕೊಡುಗೆ ನೀಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸುರೇಶ್, ಬಿಳಿಗಿರಿ ರಂಗನಬೆಟ್ಟ ಗ್ರಾಪಂ ಅಧ್ಯಕ್ಷ ಪ್ರತೀಪ್ ಕುಮಾರ್, ಉಪಾಧ್ಯಕ್ಷೆ ಕಮಲಮ್ಮ, ಹಾಲಿ ಮತ್ತು ಮಾಜಿ ಸದಸ್ಯರು, ಗ್ರಾಮದ ಮತ್ತು ಸೋಲಿಗರ ಪೋಡಿಗಳ ಮುಖಂಡರು, ಅಂಚೆ ಇಲಾಖೆಯ ಸಹಾಯಕ ನಿರ್ದೇಶಕ ಗ್ರೆಗರಿ, ನಂಜನಗೂಡು ಅಂಚೆ ವಿಭಾಗದ ಮಾರುಕಟ್ಟೆ ವ್ಯವಸ್ಥಾಪಕ ಮಹದೇವಪ್ಪ, ಅಂಚೆ ನಿರೀಕ್ಷಕರಾದ ಸ್ವಾತಿ, ಪ್ರಧ್ವಿ, ಶ್ರೀದರ್, ಸುಪ್ರಿಯಾ, ಅಂಚೆ ಮೇಲ್ವಿಚಾರಕಾರದ ಭಾಗ್ಯರಾಜು, ಮಹೇಂದ್ರ, ಬಿಳಿಗಿರಿ ರಂಗನಬೆಟ್ಟದ ಅಂಚೆ ಸಿಬ್ಬಂದಿ, ಅಂಚೆ ಇಲಾಖೆಯ ವಿನಯ್, ನಾಗೇಂದ್ರ, ಕುಶಾಲ್, ಹೇಮಂತ್, ಮಹೇಶ್, ರವಿ, ರಾಜೇಂದ್ರ, ಶಿವಪ್ರಸಾದ್ ಮತ್ತು ನೆರೆಯ ಅಂಚೆ ಕಚೇರಿಗಳ ಸಿಬ್ಬಂದಿ ವರ್ಗ ಹಾಜರಿದ್ದರು. ನಂಜನಗೂಡು ಅಂಚೆ ಅಧೀಕ್ಷಕ ಎನ್. ಗೋವಿಂದರಾಜು ಸ್ವಾಗತಿಸಿ, ಸಹಾಯಕ ಅಂಚೆ ಅಧೀಕ್ಷಕ ಕೃಷ್ಣದಾಸ್ ವಂದಿಸಿದರು. ಗಿರೀಶ್ ಕಾರ್ಯಕ್ರಮವನ್ನು ನಿರೂಪಿಸಿದರು.