ಬೆಂಗಳೂರಿನಿಂದ ಮರಳುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡ ಶಿಕಾರಿಪುರ ಮೂಲದ ಯುವ ದಂಪತಿಗಳ ನೆರವಿಗೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಜಿಲ್ಲಾ ಒಕ್ಕಲಿಗ ಸಮಾಜ, ಬಿಜೆಪಿ ಮುಖಂಡ ಎಸ್.ಟಿ.ಯೋಗೇಶ್ವರ(ಯಗ್ಗಪ್ಪ) ಇತರರು ಮಾನವೀಯತೆ ಮೆರೆದ ಘಟನೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರಿನಿಂದ ಮರಳುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡ ಶಿಕಾರಿಪುರ ಮೂಲದ ಯುವ ದಂಪತಿಗಳ ನೆರವಿಗೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಜಿಲ್ಲಾ ಒಕ್ಕಲಿಗ ಸಮಾಜ, ಬಿಜೆಪಿ ಮುಖಂಡ ಎಸ್.ಟಿ.ಯೋಗೇಶ್ವರ(ಯಗ್ಗಪ್ಪ) ಇತರರು ಮಾನವೀಯತೆ ಮೆರೆದ ಘಟನೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ಭಾನುವಾರ ತಡರಾತ್ರಿ ನಡೆದಿದೆ.ನಗರದ ಜಿಲ್ಲಾ ಒಕ್ಕಲಿಗ ಸಮಾಜದ ಮುಖಂಡರಾದ ಬಿಜೆಪಿಯ ಎಸ್.ಟಿ.ಯೋಗೇಶ್ವರ, ಕಾಂಗ್ರೆಸ್ಸಿನ ಎಂ.ಜೆ.ನಾಗರಾಜ, ಪುಟ್ಟಸ್ವಾಮಿ, ರಾಜಣ್ಣ ಬೆಂಗಳೂರಿನಲ್ಲಿ ಒಕ್ಕಲಿಗ ಸಮಾಜದ ಮುಖಂಡರಾದ ಪ್ರತಿಪಕ್ಷ ನಾಯಕ ಆರ್.ಅಶೋಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ, ಸಮಾಜದ ಸಭೆಯನ್ನು ಮುಗಿಸಿಕೊಂಡು ದಾವಣಗೆರೆ ಕಾರಿನಲ್ಲಿ ಮರಳುತ್ತಿದ್ದರು.
ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಮರಳುವಾಗ ಭಾನುವಾರ ತಡರಾತ್ರಿ 1.41ರ ವೇಳೆ ಯಗ್ಗಪ್ಪ ಇತರರು ಕಾರಿನಲ್ಲಿ ಬರುತ್ತಿದ್ದ ವೇಳೆ ಹಿಂದೆಯೆ ಬರುತ್ತಿದ್ದ ದುಬಾರಿ ಬೈಕ್‌ವೊಂದು ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್‌ನತ್ತ ನುಗ್ಗಿ ಪಲ್ಟಿಯಾಗುವುದನ್ನು ಸೈಡ್ ಮಿರರ್‌ನಲ್ಲಿ ಗಮನಿಸಿದ್ದಾರೆ. ಎನ್ಎಚ್‌ನಲ್ಲಿ ತಕ್ಷಣವೇ ಕಾರನ್ನು ನಿಲ್ಲಿಸಿದರೆ ಕಷ್ಟವೆಂದು ಸುಮಾರು ದೂರ ಹೋಗಿ, ಯು ಟರ್ನ್ ತೆಗೆದುಕೊಂಡು ಬಂದು, ಸರ್ವೀಸ್ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿದ್ದಾರೆ. ತಡೆಗೋಡೆ ಹಾರಿಕೊಂಡು ಬಂದು, ಹೆದ್ದಾರಿ ಮಧ್ಯೆ ಡಿವೈಡರ್‌ನಲ್ಲಿ ನರಳುತ್ತಾ ಬಿದ್ದಿದ್ದ ಯುವ ದಂಪತಿಗಳನ್ನು ಕಂಡಿದ್ದಾರೆ.ತಕ್ಷಣವೇ ಯೋಗೇಶ್ವರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು, ಗಾಯಾಳು ದಂಪತಿಗಳನ್ನು ಅಂಬ್ಯುಲೆನ್ಸ್‌ನಲ್ಲಿ ದಾವಣಗೆರೆ ಆರೈಕೆಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಮೂಲತಃ ಶಿಕಾರಿಪುರದ ವಿಠ್ಠಲ ನಗರದ ವಾಸಿಗಳಾದ ಲಿಂಗರಾಜು ಹಾಗೂ ಭಾವನಾ ದಂಪತಿ ಅಪಘಾತದಲ್ಲಿ ಗಂಭೀರ ಗಾಯಗೊಂಡವರು. ಬೆಂಗಳೂರಿನ ಬೇಗೂರಿನ ಹೋಟೆಲ್‌ವೊಂದರಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ವಹಣೆ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದ ಲಿಂಗರಾಜ ದಂಪತಿ ಸಮೇತ ರಾತ್ರಿ ಶಿಕಾರಿಪುರಕ್ಕೆ ದಾವಣಗೆರೆ ಮಾರ್ಗವಾಗಿ ಹೊರಟಿದ್ದರು.
ಕೆಲಸಕ್ಕೆ ರಜೆ ಹಾಕಿ, ಬೈಕ್‌ನಲ್ಲಿ ಶಿಕಾರಿಪುರಕ್ಕೆ ಹೊರಟಿದ್ದ ದಂಪತಿ ಹೆಲ್ಮೆಟ್ ಧರಿಸಿದ್ದರೂ ಅಪಘಾತದ ರಭಸಕ್ಕೆ ಇಬ್ಬರ ಹೆಲ್ಮೆಟ್‌ಗಳು ಒಡೆದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಜಿಲ್ಲಾ ಒಕ್ಕಲಿಗ ಸಮಾಜದ ಮುಖಂಡರಾದ ಎಸ್.ಟಿ.ಯೋಗೇಶ್ವರ(ಯಗ್ಗಪ್ಪ), ಎಂ.ಜೆ.ನಾಗರಾಜ, ಪುಟ್ಟಸ್ವಾಮಿ, ರಾಜಣ್ಣ ಪೊಲೀಸರ, ಸ್ಥಳೀಯರ ಜೊತೆ ಸೇರಿ, ದಾವಣಗೆರೆ ಆರೈಕೆ ಆಸ್ಪತ್ರೆಗೆ ದಾಖಲಿಸಿದ್ದು, ಕಾಯಿಪೇಟೆಯಲ್ಲಿರುವ ಗಾಯಾಳುಗಳ ಸಂಬಂಧಿಗೆ ವಿಷಯ ಮುಟ್ಟಿಸಲಾಯಿತು.ಮೂರು ವರ್ಷದ ಹಿಂದಷ್ಟೇ ಲಿಂಗರಾಜು, ಭಾವನಾ ಪ್ರೇಮ ವಿವಾಹವಾಗಿದ್ದರು. ಸೋಮವಾರ ಲಿಂಗರಾಜ ಮನೆ ದೇವರಾದ ದೇವರಗುಡ್ಡಕ್ಕೆ ಕುಟುಂಬ ಸಮೇತರಾಗಿ ಹೋಗಬೇಕಿದ್ದ ಕಾರಣ ಶಿಕಾರಿಪುರಕ್ಕೆ ಬೈಕ್‌ನಲ್ಲಿ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ. ಗಾಯಾಳು ಲಿಂಗರಾಜು, ಭಾವನಾ ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಗಾಯಾಳು ಲಿಂಗರಾಜ ತಾಯಿ, ಸಹೋದರ, ಸಹೋದರಿ ಸಹ ಆಸ್ಪತ್ರೆಗೆ ಬಂದಿದ್ದು, ಬಿಜೆಪಿ ಮುಖಂಡರಾದ ಯಗ್ಗಪ್ಪ, ಕೆಟಿಜೆ ನಗರ ಲೋಕೇಶ, ಜಗದೀಶಕುಮಾರ ಪಿಸೆ ಇತರರು ಹೋಗಿ ಧೈರ್ಯ ಹೇಳಿ ಬಂದಿದ್ದಾರೆ.
ಆರ್.ಅಶೋಕ, ಎಚ್‌ಡಿಕೆ ಭರವಸೆಬೆಂಗಳೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಮಾಜದ ನಾಯಕರಾದ ಆರ್.ಅಶೋಕ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಎಸ್,ಟಿ. ಯೋಗೇಶ್ವರ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಜೆ.ನಾಗರಾಜ, ಪುಟ್ಟಸ್ವಾಮಿ, ರಾಜಣ್ಣ ಭೇಟಿ ಮಾಡಿದ್ದರು. ದಾವಣಗೆರೆಯಲ್ಲಿ ಒಕ್ಕಲಿಗ ಸಮಾಜದ ಕಟ್ಟಡ ನಿರ್ಮಿಸಲು 20 ಲಕ್ಷ ಅನುದಾನ ನೀಡುವುದಾಗಿ ಆರ್.ಅಶೋಕ ಭರವಸೆ ನೀಡಿದರೆ, ಭೋಜೆಗೌಡರಿಗೆ ಹೇಳಿ 10 ಲಕ್ಷ ರು. ಅನುದಾನ ಕೊಡಿಸುವುದಾಗಿ ಎಚ್.ಡಿ.ಕುಮಾರ ಸ್ವಾಮಿ ಭರವಸೆ ನೀಡಿದ್ದಾರೆ ಎಂದು ಎಸ್.ಟಿ.ಯೋಗೇಶ್ವರ ತಿಳಿಸಿದ್ದಾರೆ.