ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕಬ್ಬು ತುಂಬಿದ ಟ್ರ್ಯಾಕ್ಟರ್ ಮತ್ತು ಬೈಕಿನ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಗಾಯಗಳಾದ ಘಟನೆ ನಡೆದಿದೆ.ಪಟ್ಟಣದ ಮಕಾನ್ ಬಳಿ ಕಬ್ಬು ತುಂಬಿದ ಡಬಲ್ ಟ್ರೈಲರ್ ಹೊಂದಿರುವ ಹೊರ ರಾಜ್ಯದ ಟ್ರ್ಯಾಕ್ಟರ್‌ನಿಂದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಸರಬರಾಜು ಮಾಡಲು ಟ್ರ್ಯಾಕ್ಟರ್ ತೆರಳುತ್ತಿತ್ತು. ಇದೇ ಸಂದರ್ಭದಲ್ಲಿ ಬೈಕಿನಿಂದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ದೊಡ್ಡತರಹಳ್ಳಿ ಗ್ರಾಮದ ಯುವಕ ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಹಿಂಬದಿಗೆ ಬೈಕಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಅಪಾರ ಗಾಯಗಳಾಗಿವೆ.ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆ ಹಾಸನದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲೂ ಕೂಡ ಚಿಕಿತ್ಸೆಯೂ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪಟ್ಟಣದ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಲಾಗಿದೆ.ಈ ಅಪಘಾತದ ಹಿನ್ನೆಲೆಯನ್ನು ಕುರಿತು ಸ್ಥಳೀಯ ನಿವಾಸಿ ಮಾತನಾಡಿ, ಸ್ಥಳೀಯ ಪೊಲೀಸ್ ಇಲಾಖೆಯವರು ಮತ್ತು ಸಾರಿಗೆ ಇಲಾಖೆ ಹಾಗೂ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ. ಏಕೆಂದರೆ ಹೊರ ರಾಜ್ಯಗಳಿಂದ ಟ್ರ್ಯಾಕ್ಟರ್‌ಗಳನ್ನು ಕರೆತಂದು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ಕಬ್ಬನ್ನು ಸರಬರಾಜು ಮಾಡಿಸಲು ಮುಂದಾಗಿದ್ದಾರೆ. ಆದರೆ ಕಬ್ಬು ಸರಬರಾಜು ಮಾಡುತ್ತಿರುವ ಟ್ರ್ಯಾಕ್ಟರ್ ಮಾಲೀಕರು ಒಂದು ಇಂಜಿನ್‌ಗೆ ಎರಡು ಟ್ರೈಲರ್‌ಗಳನ್ನು ಅಳವಡಿಸಿಕೊಂಡು ಕಬ್ಬು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಕೆಲವು ವಾಹನ ಸವಾರರಿಗೆ ಗೊಂದಲಗಳು ಸೃಷ್ಟಿಯಾಗುತ್ತಿವೆ. ಈ ಟ್ರ್ಯಾಕ್ಟರ್‌ಗಳಿಗೆ ಯಾವುದೇ ರೀತಿಯ ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ನಾಮಫಲಕಗಳು ಇಲ್ಲದೆ ತಮಗೆ ಮನ ಬಂದಂತೆ ಚಾಲಕರು ಚಾಲನೆ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಕೂಡಲೇ ಸಾರಿಗೆ ಇಲಾಖೆಯವರು ಮತ್ತು ಪೊಲೀಸ್ ಇಲಾಖೆಯವರು ಇಂತಹ ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.