ದೇವದುರ್ಗ - ತಿಂಥಣಿ ರಸ್ತೆ ಮಾರ್ಗದ ಜೆಸ್ಕಾಂ ಕಚೇರಿ ಬಳಿ ಬೊಲೋರೋ ವಾಹನಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ, ಇಬ್ಬರು ಮೃತಪಟ್ಟ ಘಟನೆ ಜಾಲಹಳ್ಳಿಯಲ್ಲಿ ಬುಧವಾರ ಸಂಜೆ ಜರುಗಿದೆ.ಮೃತಪಟ್ಟವರನ್ನು ಹೊಸೂರು ಸಿದ್ದಾಪುರದ ನಿಂಗಣ್ಣ ದೊಡ್ಡಮನಿ (28) ಮತ್ತು ಜಾಲಹಳ್ಳಿಯ ಹನುಮಯ್ಯ ಗೋಪಾಳಪೂರ (50) ಎಂದು ಗುರುತಿಸಲಾಗಿದೆ.

ಕನ್ನಡಪ್ರಭ ವಾರ್ತೆ ದೇವದುರ್ಗ

ದೇವದುರ್ಗ - ತಿಂಥಣಿ ರಸ್ತೆ ಮಾರ್ಗದ ಜೆಸ್ಕಾಂ ಕಚೇರಿ ಬಳಿ ಬೊಲೋರೋ ವಾಹನಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ, ಇಬ್ಬರು ಮೃತಪಟ್ಟ ಘಟನೆ ಜಾಲಹಳ್ಳಿಯಲ್ಲಿ ಬುಧವಾರ ಸಂಜೆ ಜರುಗಿದೆ.ಮೃತಪಟ್ಟವರನ್ನು ಹೊಸೂರು ಸಿದ್ದಾಪುರದ ನಿಂಗಣ್ಣ ದೊಡ್ಡಮನಿ (28) ಮತ್ತು ಜಾಲಹಳ್ಳಿಯ ಹನುಮಯ್ಯ ಗೋಪಾಳಪೂರ (50) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರಂಗನಾಥ ಜಾಲಹಳ್ಳಿ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ರಸ್ತೆ ಮಾರ್ಗ ದಲ್ಲಿ ಜಿಪಂ ಕುಡಿವ ನೀರಿನ ವಿಭಾಗದಿಂದ ನಡೆಯುತ್ತಿರುವ ಜಲಧಾರೆ ಯೋಜನೆ ಕಾಮಗಾರಿ ಕಾರಣ ಎಂಬ ಆರೋಪ ಕೇಳಿಬಂದಿದೆ.

ದಿಢೀರ್‌ ಸಂಚಾರ ತಡೆ: ಜಾಲಹಳ್ಳಿಯ ವಿವಿಧ ಸಂಘಟನೆಗಳು, ಮುಖಂಡರು ಹಾಗೂ ಮೃತಪಟ್ಟವರ ಕುಟುಂಬಸ್ಥರಿಂದ ಜಾಲಹಳ್ಳಿ ಡಾ.ಬಿ.ಅರ್.ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಮುಂಜಾನೆ ದಿಢೀರ್‌ ಸಂಚಾರ ತಡೆ ಮಾಡಲಾಯಿತು.

ಜಲಧಾರೆ ಯೋಜನೆಯ ಪೈಪ್‌ಗಳನ್ನು ಅಳವಡಿಸಲು ತಗ್ಗು ಅಗೆದು ರಸ್ತೆ ಪಕ್ಕದಲ್ಲಿ ಮಣ್ಣಿನ ಕುಪ್ಪೆ ಹಾಕಿದ್ದರಿಂದ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಮೃತರ ಕುಟುಂಬಗಳಿಗೆ ನೆರವು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಂಗನಾಥ ಜಾಲಹಳ್ಳಿಗೆ ಚಿಕಿತ್ಸಾ ವೆಚ್ಚ ನೀಡುವುದು ಹಾಗೂ ಕಾಮಗಾರಿಯ ಟೆಂಡರ್ ಪಡೆದಿರುವ ಶಂಕರನಾರಾಯಣ ಕಂಪನಿ ಅಧಿಕಾರಿಗಳ ಮೇಲೆ ಹಾಗೂ ಕಾಮಗಾರಿ ಉಸ್ತುವಾರಿ ಹೊಣೆ ಹೊತ್ತಿರುವ ಜಿಪಂ ಕುಡಿವ ನೀರಿನ ವಿಭಾಗದ ಎಂಜನೀಯರ್‌ಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಸಂಘಟನಾಕಾರರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ನರಸಣ್ಣ ನಾಯಕ,ವಿವಿದ ಪಕ್ಷಗಳ ಮುಖಂಡರಾದ ಚಂದಪ್ಪ ಬುದ್ದಿನ್ನಿ,ಶ್ರೀದೇವಿ ನಾಯಕ,ಬಸನಗೌಡ ದೇಸಾಯಿ, ವೀರಣ್ಣ ಬಳೆ,ಭೀಮಣ್ಣ ಗುಮೇದಾರ,ರಂಗಣ್ಣ ಕೋಲ್ಕಾರ,ಅಯ್ಯಪ್ಪ ಸ್ವಾಮಿ,ಗ್ರೇಡ್-2 ತಹಸೀಲ್ದಾರ್‌ ಪರುಶುರಾಮ್,ಜಿ.ಪಂ ಕುಡಿವ ನೀರಿನ ವಿಭಾಗದ ಎಇಇ ಹೀರಾಲಾಲ್ , ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ,ಸಿಪಿಐಗಳಾದ ಪುಂಡಲೀಕ ಪಟ್ಟೇದಾರ, ಹೊಸಕೇರಪ್ಪ ಹಾಗೂ ಇತರರು ಇದ್ದರು.

ಸಂಧಾನ: ಸಂಚಾರಕ್ಕೆ ಅಡ್ಡಿ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗಿರುವದರಿಂದ ರಸ್ತೆ ತಡೆ ಕಾರ್ಯಕ್ರಮ ಕೈಬಿಟ್ಟು, ಪ್ರತಿಭಟನಾಕಾರರು, ಅಧಿಕಾರಿಗಳು ಮಾತುಕತೆಗೆ ಸಮ್ಮತಿಸಿದರು. ಕಾಮಗಾರಿ ಟೆಂಡರ್ ಪಡೆದಿರುವ ಶಂಕರನಾರಾಯಣ ಕಂಪನಿ ಅಧಿಕಾರಿಗಳು ಮೃತ ಕುಟುಂಬಗಳಿಗೆ ಪರಿಹಾರ ನೀಡಲು ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಧರಣಿ ಅಂತ್ಯಗೊಳಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟರವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಗುರುವಾರ ಜರುಗಿತು.