ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುವ ನೀತಿ ಅನುಸರಿಸುತ್ತಿದೆ. ಮಹಿಳೆಯರಿಗೆ ಹಣ ಕೊಡುವುದು, ಪುರುಷರಿಂದ ಕಸಿದುಕೊಳ್ಳುವ ಯತ್ನ ಮಾಡುತ್ತಿದೆ.
ಧಾರವಾಡ:
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಎರಡು ದಿನಗಳ ಹಿಂದಷ್ಟೇ ಬೈಕ್ ತಳ್ಳಿಕೊಂಡು, ಕೈಯಲ್ಲಿ ಚಿಪ್ಪು ಹಿಡಿದು ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸುವ ಮೂಲಕ ಪ್ರತಿಭಟಿಸಿದ್ದ ಬಿಜೆಪಿ ಮುಖಂಡರು ಗುರುವಾರ ಬೈಕ್ ಶವಯಾತ್ರೆ ಮೂಲಕ ಗಮನ ಸೆಳೆದರು.ತೈಲ ಬೆಲೆ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಹಿನ್ನೆಲೆಯಲ್ಲಿ ಇಲ್ಲಿಯ ಜ್ಯುಬಿಲಿ ವೃತ್ತದಲ್ಲಿ ಬೈಕ್ ಶವ ಯಾತ್ರೆ ಮಾಡಿದ ಬಿಜೆಪಿ ಕಾರ್ಯಕರ್ತರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಮೋಹನ ರಾಮದುರ್ಗ, ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುವ ನೀತಿ ಅನುಸರಿಸುತ್ತಿದೆ. ಮಹಿಳೆಯರಿಗೆ ಹಣ ಕೊಡುವುದು, ಪುರುಷರಿಂದ ಕಸಿದುಕೊಳ್ಳುವ ಯತ್ನ ಮಾಡುತ್ತಿದೆ. ಗ್ಯಾರಂಟಿ ಯೋಜನೆ ಪೈಕಿ ಮಹಿಳೆಯರಿಗೆ ಸರಿಯಾಗಿ ತಿಂಗಳಿಗೆ ಹಣ ಬರುತ್ತಿಲ್ಲ. ಇದೀಗ ಅದನ್ನು ಸರಿದೂಗಿಸಲು ತೈಲ ಬೆಲೆ ಏರಿಕೆ ಮಾಡಲಾಗುತ್ತಿದೆ. ತೈಲ ಬೆಲೆ ಮಾತ್ರ ಏರಿಕೆಯಾಗದೇ ಇದರ ಪರಿಣಾಮ ದಿನನಿತ್ಯದ ವಸ್ತುಗಳು ಸಹ ಏರಿಕೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸದ್ಯ ಸರ್ಕಾರ ಮೋಸದ ಗ್ಯಾರಂಟಿಗಳಿಂದ ಆಡಳಿತ ನಡೆಸುತ್ತಿದ್ದು, ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲದೇ ಹಿಂದುಳಿದ, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಬಳಸಿಕೊಂಡಿದೆ. ರಾಜ್ಯ ಸರ್ಕಾರ ಆಡಳಿತ ನಡೆಸಲು ಸಂಪೂರ್ಣವಾಗಿ ನೈತಿಕತೆ ಕಳೆದುಕೊಂಡಿದ್ದು ಕೂಡಲೇ ತೈಲ ಬೆಲೆ ಇಳಿಕೆ ಮಾಡಬೇಕು. ಇಲ್ಲದೇ ಹೋದಲ್ಲಿ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಶಿವು ಹೀರೆಮಠ, ಬಸವರಾಜ ಗೋಂಡಗೊವಿ, ಸುರೇಶ ಬೆದರೆ, ಕುಮಾರ ದೇಸಾಯಿ, ಪವನ ತಿಟೆ, ಅಮೀತ ಪಾಟೀಲ, ನಿಜನಗೌಡ ಪಾಟೀಲ, ಯಲ್ಲಪ್ಪ ಜಾನಕೂನವರ, ರುದ್ರಪ್ಪ ಅರಿವಾಳ, ಸಾಂಬಾಜಿ ಜಾಧವ ,ಪ್ರಮೂದ ಕಾರಕೂನ, ಶ್ರೀನಿವಾಸ ಕೊಟ್ಯಾನ, ಮಂಜುನಾಥ ಹೆಬಸೂರ, ಸಂತೋಷ ಬಸವರಾಜ ಬಾಳಗಿ, ಶಫಿ ಬಿಜಾಪುರಿ, ಮಂಜುನಾಥ ಕಮ್ಮಾರ ಇದ್ದರು.