ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಂಗವಿಕಲರ ನಡೆ ರಾಜಕೀಯದ ಕಡೆ ಅಭಿಯಾನ ಬೈಕ್ ರ್‍ಯಾಲಿ ಫೆ.19ರಂದು ಬೀದರ್ ಜಿಲ್ಲೆ ಬಸವ ಕಲ್ಯಾಣದಿಂದ ಹೊರಟು ಫೆ.23 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ತಲುಪಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಖಜಾಂಚಿ ಎಂ.ತಿಪ್ಪಮ್ಮ ತಿಳಿಸಿದರು.ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಸಾವಿರ ಬೈಕ್‍ಗಳಲ್ಲಿ ಬೆಂಗಳೂರು ಚಲೋ ರ್‍ಯಾಲಿ ಹೊರಡಲಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಕಲಚೇತನರಿಗೆ ಶೇ.5ರಷ್ಟು ಮೀಸಲಾತಿ ನೀಡಬೇಕು. ರಾಜ್ಯ ಸರ್ಕಾರ ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್‍ನಲ್ಲಿ ಅಂಗವಿಕಲರಿಗೆ ಬಜೆಟ್ ದ್ವಿಗುಣಗೊಳಿಸಬೇಕು. ಶಕ್ತಿ ಯೋಜನೆಯಡಿ ವಿಶೇಷ ಚೇತನ ಮಹಿಳೆಯರಿಗೆ ಒದಗಿಸಿರುವ ಉಚಿತ ಬಸ್ ಪಾಸ್ ಸೌಲಭ್ಯಗಳನ್ನು ಪುರುಷ ವಿಶೇಷ ಚೇತನರಿಗೂ ವಿಸ್ತರಿಸಬೇಕು.
ವಿಶೇಷ ಚೇತನರಿಗೆ ಪ್ರತಿ ತಿಂಗಳು ನೀಡುತ್ತಿರುವ 1400 ರು. ಮಾಶಾಸನವನ್ನು 6 ಸಾವಿರ ರು. ಹೆಚ್ಚಿಸಿ ಪ್ರತಿ ತಿಂಗಳು 10ನೇ ತಾರೀಖಿನೊಳಗೆ ವಿಶೇಷ ಚೇತನರ ಕೈಸೇರಬೇಕೆಂದು ಒತ್ತಾಯಿಸಿದರು.ಅನೇಕ ವರ್ಷಗಳಿಂದಲೂ ನಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಾ ಬರುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ. 2000ನೇ ಇಸವಿಯಲ್ಲಿ ವಿಕಲಚೇತನರಿಗೆ ಬಸ್ ಪಾಸ್ ನೀಡಿದ್ದ ಸರ್ಕಾರ ನಂತರ ಆರು ನೂರು ರು. ಕಟ್ಟಿಸಿಕೊಂಡು ಪಾಸ್ ನೀಡುತ್ತಿದೆ. ಇದು ನಿಲ್ಲಬೇಕು ಬೆಳಗಾಂ, ಧಾರವಾಡ, ಹಾವೇರಿ, ದಾವಣಗೆರೆ ಚಿತ್ರದುರ್ಗ, ಬಿಜಾಪುರ, ಬಾಗಲಕೋಟೆ, ಕೂಡ್ಲಿಗಿ, ಹೊಸಪೇಟೆ, ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ ಸೇರಿದಂತೆ ಅಷ್ಟ ದಿಕ್ಕುಗಳಿಂದ ಬೈಕ್‍ರ್ಯಾಲಿ ಬೆಂಗಳೂರಿಗೆ ಹೊರಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಜಿಲ್ಲಾಧ್ಯಕ್ಷ ಪಾಪಣ್ಣ ಎಂ.ಎಸ್.ತಾಲೂಕು ಅಧ್ಯಕ್ಷ ಪರಶುರಾಂ, ಕಾರ್ಯದರ್ಶಿ ರೇಷ್ಮಭಾನು, ಚಳ್ಳಕೆರೆ ತಾಲೂಕು ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಸುಜಾತ, ಸಲಹಾ ಸಮಿತಿ ಸದಸ್ಯ ತಿಪ್ಪೇಸ್ವಾಮಿ ಹಾಜರಿದ್ದರು.