ಜಿಲ್ಲೆ ದೇವದುರ್ಗ ತಾಲೂಕಿನ ಸಂಕೇಶ್ವರಹಾಳ ಗ್ರಾಮದ ಮಾದಿಗ ಸಮುದಾಯಕ್ಕೆ ಸೇರಿದ ಭೂಮಾನಂದನ ಭೀಕರ ಕೊಲೆ, ಸಿರವಾರ ತಾಲೂಕಿನ ಹೊಕ್ರಾಣಿ ಯ ಅಶ್ವಿನಿ, ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರಾಣೆಮ್ಮ ಅವರ ಕೊಲೆ ಘಟನೆಗಳನ್ನು ಖಂಡಿಸಿ, ಸರಣಿ ಪ್ರಕರಣಗಳ ಸಮಗ್ರ ತನಿಖೆಗೆ ಸಿಐಡಿಗೆ ಒಪ್ಪಿಸಿ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾ ಲಿ ಪ್ರತಿಭಟನೆಯನ್ನು ಸೋಮವಾರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಭಾನುವಾರ ಹದ್ದಿನಾಳ ಗ್ರಾಮದಿಂದ ಆರಂಭಗೊಂಡಿದ್ದ ಬೈಕ್ ರ್‍ಯಾಲಿ ರಾತ್ರಿ ಅಸ್ಕಿಹಾಳಕ್ಕೆ ಬಂದು ತಲುಪಿತ್ತು, ಸೋಮವಾರ ಅಸ್ಕಿಹಾಳ,ಕೃಷಿ ವಿಜ್ಞಾನಗಳ ವಿವಿ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತದ ಮುಖಾಂತರ ನಗರ ಪ್ರವೇಶಿಸಿದ ರ್ಯಾಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ನಡೆಯಿತು. ನಂತರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಒಕ್ಕೂಟದ ಮುಖಂಡರು ಮಾತನಾಡಿ, ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಕೊಲೆ, ಅತ್ಯಾಚಾರ ಪ್ರಕರಣಗಳು, ಆರೋಪಿತರ ಬಂಧನ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ಎಸ್.ಮಾರೆಪ್ಪ, ಅಂಬಣ್ಣ ಆರೋಲಿ, ರವೀಂದ್ರನಾಥ ಪಟ್ಟಿ, ಎಂ.ಆರ್‌.ಬೇರಿ, ವೈ.ನರಸಪ್ಪ, ಹನುಮಂತಪ್ಪ ಕಾಕರಗಲ್, ಹೇಮರಾಜ ಅಸ್ಕಿಹಾಳ, ಪಿ.ಯಲ್ಲಪ್ಪ, ಶಿವರಾಯ ಅಕ್ಕರಕಿ, ಅಬ್ರಹಾಂ ಹೊನ್ನಟಗಿ ಸೇರಿ ದಲಿತ ಪರ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ವಕೀಲರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾ ವೇದಿಕೆಯಲ್ಲಿ ವಾಗ್ವಾದ: ರಾಯಚೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ನಿರ್ಮಿಸಲಾಗಿದ್ದ ಪ್ರತಿಭಟನಾ ವೇದಿಕೆಯಲ್ಲಿ ಮುಖಂಡರ ನಡುವೆ ವಾಗ್ವಾದ ಉಂಟಾದ ಘಟನೆ ನಡೆಯಿತು. ಬೈಕ್‌ ರ್ಯಾಲಿ ಬಳಿಕ ನಡೆದ ಹೋರಾಟದ ವೇದಿಕೆ ಕಾರ್ಯಕ್ರಮಕ್ಕೆ ತಮ್ಮ ಹೆಸರನ್ನು ಕರೆದಿಲ್ಲವೆಂದು ಮುಖಂಡ ಪಿ.ಯಲ್ಲಪ್ಪ ಹಾಗೂ ಮತ್ತಿತರರು ಮತ್ತೊರ್ವ ಮುಖಂಡ ಎಂ.ಆರ್‌.ಬೇರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮುಖಂಡರ ನಡುವೆ ಮಾತಿಕೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ದಲಿತಪರ ಹೋರಾಟಕ್ಕೆ ಬಂದು ಬೆಂಬಲಿಸಿದ್ದು, ವೇದಿಕೆಗೆ ನಮ್ಮನ್ನು ಕರೆಯದೇ ಕಡೆಗಣಿಸಿರುವುದು ಸಹಿಸುವುದಿಲ್ಲ, ಇಂತಹ ಅಪಮಾನ ಮಾಡು ವುದು ಎಷ್ಟು ಸರಿ ಎಂದು ಯಲ್ಲಪ್ಪ ಅವರು ಎಂ.ಆರ್‌.ಬೇರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಈ ವಾಗ್ವಾದದಿಂದಾಗಿ ಕೆಲಕಾಲ ಗೊಂದಲ ಉಂಟಾಗಿತ್ತು. ತಕ್ಷಣ ಇದನ್ನು ಗಮನಿಸಿದ ಸಂಘಟಕರು ಮಧ್ಯಪ್ರವೇಶ ಮಾಡಿ ಸಮಾಧಾನ ಪಡಿಸಿದರು.