ವಕ್ಫ್ ಬೋರ್ಡ್ ವಜಾಗೆ ಆಗ್ರಹಿಸಿ ಬೈಕ್ ರ್‍ಯಾಲಿ

| Published : Nov 14 2024, 12:49 AM IST

ಸಾರಾಂಶ

ರೈತರ ಜಮೀನಿನ ಪಹಣಿಗಳಲ್ಲಿ ಏಕಾಏಕಿ ವಕ್ಫ್ ಹೆಸರು ಕಾಣಿಸಿಕೊಳ್ಳುತ್ತಿರುವುದರಿಂದ ಸಾಮಾನ್ಯ ರೈತರಲ್ಲಿ ಆತಂಕ, ಗೊಂದಲ, ಭಯ ಮೂಡಿದೆ. ಪಿತ್ರಾರ್ಜಿತವಾಗಿ ಅನುಭವಿಸಿಕೊಂಡು ಬಂದಿರುವ ರೈತರ ಆಸ್ತಿ ವಕ್ಫ್ ಆಸ್ತಿ ಹೇಗಾಗುತ್ತದೆ. ಸಿಕ್ಕ ಸಿಕ್ಕ ಆಸ್ತಿಯನ್ನೆಲ್ಲಾ ವಕ್ಫ್ ಆಸ್ತಿ ಎಂದು ಘೋಷಿಸುತ್ತಿರುವುದು ಅಸಂವಿಧಾನಿಕವಾಗಿದೆ. ಕೂಡಲೇ ಈ ವಕ್ಫ್ ಕಾಯಿದೆಯನ್ನೇ ರದ್ದುಗೊಳಿಸಿ ಗೊಂದಲಗಳಿಗೆ ತೆರೆ ಎಳೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಕ್ಫ್‌ನಿಂದ ರೈತರ ಜಮೀನು, ಹಿಂದೂ ದೇಗುಲ, ಸರ್ಕಾರಿ ಶಾಲೆಗಳ ಆಸ್ತಿ ಕಬಳಿಕೆಗೆ ಮುಂದಾಗಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿದರು.

ತಾಲೂಕಿನ ಕೊತ್ತತ್ತಿ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಹಿಂದೂ ಕಾರ್ಯಕರ್ತರು ರೈತರ ಜಮೀನು ಉಳಿಯಲಿ-ವಕ್ಫ್ ತೊಲಗಲಿ ಎಂಬ ಘೋಷಣೆ ಕೂಗಿದರಲ್ಲದೆ, ರಾಜ್ಯ ಸರ್ಕಾರ ಹಾಗೂ ವಕ್ಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..

ರೈತರ ಜಮೀಮಿನ ಕಂದಾಯ ದಾಖಲೆಗಳಲ್ಲಿ ವಕ್ಫ್ ಹೆಸರು ನಮೂದು ಮಾಡಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು. ರೈತರ ಜಮೀನಿನ ಪಹಣಿಗಳಲ್ಲಿ ಏಕಾಏಕಿ ವಕ್ಫ್ ಹೆಸರು ಕಾಣಿಸಿಕೊಳ್ಳುತ್ತಿರುವುದರಿಂದ ಸಾಮಾನ್ಯ ರೈತರಲ್ಲಿ ಆತಂಕ, ಗೊಂದಲ, ಭಯ ಮೂಡಿದೆ. ಪಿತ್ರಾರ್ಜಿತವಾಗಿ ಅನುಭವಿಸಿಕೊಂಡು ಬಂದಿರುವ ರೈತರ ಆಸ್ತಿ ವಕ್ಫ್ ಆಸ್ತಿ ಹೇಗಾಗುತ್ತದೆ. ಸಿಕ್ಕ ಸಿಕ್ಕ ಆಸ್ತಿಯನ್ನೆಲ್ಲಾ ವಕ್ಫ್ ಆಸ್ತಿ ಎಂದು ಘೋಷಿಸುತ್ತಿರುವುದು ಅಸಂವಿಧಾನಿಕವಾಗಿದೆ. ಕೂಡಲೇ ಈ ವಕ್ಫ್ ಕಾಯಿದೆಯನ್ನೇ ರದ್ದುಗೊಳಿಸಿ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು.

ವಕ್ಫ್ ಆಸ್ತಿ ವಿಚಾರವಾಗಿ ಗೊಂದಲ ಮೂಡಿಸುತ್ತಿರುವ ಸಚಿವ ಜಮೀರ್ ಅಹಮದ್‌ಖಾನ್ ಸಮಾಜದಲ್ಲಿ ಸೌಹಾರ್ದತೆಯನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಂದ ಕೂಡಲೇ ರಾಜೀನಾಮೆ ಪಡೆಯಬೇಕು. ದಿನಕ್ಕೊಂದು ಕಡೆ ವಕ್ಫ್ ಆಸ್ತಿ ವಿವಾದ ಪ್ರಕರಣಗಳು ಭುಗಿಲೇಳುತ್ತಿರುವುದರಿಂದ ಅಶಾಂತಿ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ವಕ್ಫ್ ಬೋರ್ಡ್‌ನ್ನು ವಜಾಗೊಳಿಸುವ ಮೂಲಕ ಎಲ್ಲರ ಆತಂಕ-ಭಯ ದೂರ ಮಾಡುವಂತೆ ಆಗ್ರಹಿಸಿದರು.

ಮೈಸೂರಿನ ಹಿಂದೂಪರ ಸಂಘಟನೆ ಮುಖಂಡ ಬಸವರಾಜು ನೇತೃತ್ವದಲ್ಲಿ ರ್ಯಾಲಿ ನಡೆಯಿತು.