ಟಿಪ್ಪರ್ ಡಿಕ್ಕಿ, ಬೈಕ್ ಸವಾರ ಸಾವು

| Published : Jan 25 2024, 02:03 AM IST

ಸಾರಾಂಶ

ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹಾನಗಲ್ಲ ರಸ್ತೆಯ ಜಾನುವಾರು ಮಾರುಕಟ್ಟೆ ಸಮೀಪ ಬುಧವಾರ ಸಂಭವಿಸಿದೆ.

ಹಾವೇರಿ:

ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹಾನಗಲ್ಲ ರಸ್ತೆಯ ಜಾನುವಾರು ಮಾರುಕಟ್ಟೆ ಸಮೀಪ ಬುಧವಾರ ಸಂಭವಿಸಿದೆ.

ನಗರದ ಲಕ್ಷ್ಮೀ ಆಯಿಲ್ ಮಿಲ್ ಮಾಲೀಕ ಅರುಣಕುಮಾರ ವೀರಣ್ಣ ಕೋರಿ(೫೧) ಮೃತರು. ಹಾನಗಲ್ಲ ರಸ್ತೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದಾಗ ಅರುಣಕುಮಾರ ಕೋರಿ ಅವರ ಬೈಕ್‌ಗೆ ಟಪ್ಪರ್ ಡಿಕ್ಕಿ ಹೊಡೆದು ಲಾರಿಯ ಕೆಳಗಡೆ ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಟಿಪ್ಪರ್ ಹಾಗೂ ಚಾಲಕನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಧಾನಿ ನಿಂದಿಸಿದ ಅನ್ಯ ಕೋಮಿನ ಯುವಕನ ಬಂಧನ:ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಗ್ರಾಮದ ವ್ಯಕ್ತಿಯೊಬ್ಬನಿಗೆ ಮೊಬೈಲ್ ಧ್ವನಿ ಸಂದೇಶ ಕಳುಹಿಸಿದ ಅನ್ಯಕೋಮಿನ ಯುವಕನ ಮೇಲೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ತಡರಾತ್ರಿ ಪ್ರಕರಣ ದಾಖಲಾಗಿದೆ.ರಾಣಿಬೆನ್ನೂರು ತಾಲೂಕಿನ ಹೆಡಿಯಾಲ ಗ್ರಾಮದ ಸಾಧಿಕ್ ದಾಲ್ ರೊಟ್ಟಿ ಉರ್ಫ್ ಹರಪನಹಳ್ಳಿ (26) ಆರೋಪಿ.ಆರೋಪಿಯು ಪ್ರಧಾನಿ ನರೇಂದ್ರ ಮೋದಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಒಂದು ಮೊಬೈಲ್ ಸಂದೇಶವನ್ನು ಅದೇ ಗ್ರಾಮದ ಯೋಗೇಶ ಷಣ್ಮುಖಪ್ಪ ತೋಟಗೇರಗೆ ಕಳುಹಿಸಿದ್ದಲ್ಲದೆ, ತನ್ನ ಸ್ಟೇಟಸ್‌ನಲ್ಲಿ ಶ್ರೀರಾಮ ಮಂದಿರದ ಚಿತ್ರದ ಮೇಲೆ ಅಲ್ಲಾಹು ಅಕ್ಬರ್ ಅಂತಾ ಹಾಕಿಕೊಂಡಿದ್ದಾನೆ. ಯೋಗೇಶ ತನ್ನ ಸ್ನೇಹಿತ ನಾಗೇನಹಳ್ಳಿ ಗ್ರಾಮದ ಶಿವನಗೌಡ ಭರಮನಗೌಡ ಮುಲ್ಕಿಗೌಡ್ರಗೆ ವಿಷಯ ತಿಳಿಸಿದ್ದು, ಆರೋಪಿ ವಿರುದ್ಧ ಹಲಗೇರಿ ಪೊಲೀಸ್‌ ಠಾಣೆಯಲ್ಲಿ ಶಿವನಗೌಡ ದೂರು ದಾಖಲಿಸಿದ್ದಾರೆ.ದೂರು ದಾಖಲಿಸಲು ಮೀನಮೇಷ:ಆರೋಪಿ ವಿರುದ್ಧ ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದಾಗ ಮೊದಲಿಗೆ ಪೊಲೀಸರು ಸತಾಯಿಸಿದ್ದಾರೆ. ಈ ವಿಷಯ ತಿಳಿದ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ತಕ್ಷಣವೇ ಹಲಗೇರಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್‌ ಅಧಿಕಾರಿಗಳಿಗೆ ಪರಿಸ್ಥಿತಿ ವಿವರಿಸಿದಾಗ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಬೆಂಗಳೂರಿನಲ್ಲಿದ್ದ ಯುವಕ ಸಾಧಿಕ್‌ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.