ಮರ ಬಿದ್ದು ಬೈಕ್ ಸವಾರನಿಗೆ ಗಾಯ

| Published : Jun 29 2024, 12:34 AM IST

ಸಾರಾಂಶ

ಹೊನ್ನಾವರ ತಾಲೂಕಿನ ಅನಿಲಗೋಡ ನಿವಾಸಿ, ಬೈಕ್ ಸವಾರ ಬಾಬು ನಾಯ್ಕ(52) ಗಾಯಗೊಂಡವರು. ಬೈಕ್ ಹಿಂಬದಿಯಲ್ಲಿದ್ದ ಪತ್ನಿ ಭಾಗೀರಥಿ ನಾಯ್ಕ ಅದೃಷ್ಟವಶಾತ್ ಪಾರಾಗಿದ್ದಾರೆ.

ಹೊನ್ನಾವರ: ತಾಲೂಕಿನ ನಗರಬಸ್ತಿಕೇರಿ ಹೊನ್ನಾವರ ಮಾರ್ಗದಲ್ಲಿ ಬೃಹತ್ ಮರವೊಂದು ಬೈಕ್ ಸವಾರರ ಮೇಲೆ ಬಿದ್ದು ಸವಾರ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಅನಿಲಗೋಡ ನಿವಾಸಿ, ಬೈಕ್ ಸವಾರ ಬಾಬು ನಾಯ್ಕ(52) ಗಾಯಗೊಂಡವರು. ಬೈಕ್ ಹಿಂಬದಿಯಲ್ಲಿದ್ದ ಪತ್ನಿ ಭಾಗೀರಥಿ ನಾಯ್ಕ ಅದೃಷ್ಟವಶಾತ್ ಪಾರಾಗಿದ್ದಾರೆ. ನಗರಬಸ್ತಿಕೇರಿಯಲ್ಲಿ ತಮ್ಮ ಸಂಬಂಧಿಯೊಬ್ಬರ ಶವಸಂಸ್ಕಾರಕ್ಕೆಂದು ದಂಪತಿ ಬೈಕಿನಲ್ಲಿ ವಾಪಸ್ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅದೇ ಮಾರ್ಗದಲ್ಲಿ ಬರುತ್ತಿದ್ದ ಸ್ಥಳೀಯರು, ಬೈಕ್ ಸವಾರರು ಮತ್ತು ಕಾರಿನಲ್ಲಿ ಬರುತ್ತಿದ್ದ ಭಟ್ಕಳದ ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ ಮತ್ತು ಗಣಪತಿ ಗೌಡರು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯ ಮಾಡಿ, ಗಾಯಳುವನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಘಟನೆಯಲ್ಲಿ ರಸ್ತೆ ಪಕ್ಕದ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಮರ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ.ಮಳೆಗೆ ನೆನೆದಿದ್ದ ಕಟ್ಟಡದ ಗೋಡೆ ಕುಸಿದು ಮಹಿಳೆ ಸಾವು

ಕಾರವಾರ: ತಾಲೂಕಿನ ಅಸ್ನೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರವ ತೊರ್ಲೆಬಾಗ ಮಜಿರೆಯಲ್ಲಿ ಮಳೆಯಿಂದಾಗಿ ನೆನೆದ ಹಳೆಯ ಕಟ್ಟಡದ ಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಗುಲಾಬಿ ರಾಮಚಂದ್ರ ಮಾಂಜ್ರೇಕರ(೭೦) ಮೃತಪಟ್ಟ ಮಹಿಳೆ. ಚಿತ್ತಾಕುಲದಲ್ಲಿ ಹಣ್ಣು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಅವರು ಗುರುವಾರ ಮಧ್ಯಾಹ್ನ ತಮ್ಮ‌ ಮನೆಯ ಪಕ್ಕದಲ್ಲಿದ್ದ ಹಳೆಯ ಕಟ್ಟಡದಲ್ಲಿ ಹಸುಗಳಿಗೆ ಗಂಜಿ ನೀಡಲು ತೆರಳಿದ್ದರು. ಆಗ ಮಳೆಗೆ ನೆನೆದ ಮಣ್ಣಿನ ಗೋಡೆ ಕುಸಿದಿದ್ದು, ವೃದ್ಧೆ ಮಣ್ಣಿನೊಳಗೆ ಸಂಪೂರ್ಣವಾಗಿ ಮುಚ್ಚಿಹೋಗಿದ್ದರು. ಹೀಗಾಗಿ ಮಹಿಳೆಯನ್ನು ಸ್ಥಳೀಯರು ಗಮನಿಸಿರಲಿಲ್ಲ. ಶುಕ್ರವಾರ ಬೆಳಗ್ಗೆ ಮಹಿಳೆಯ ಕಾಲು ಸ್ಥಳೀಯರಿಗೆ ಕಾಣಿಸಿದೆ. ಬಳಿಕ ಸ್ಥಳಕ್ಕೆ ತಹಸೀಲ್ದಾರ್‌ ನಿಶ್ಚಲ ನರೋನ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಸಿದು ಬಿದ್ದು ಮೀನುಗಾರ ಸಾವು

ಗೋಕರ್ಣ: ಬಲೆ ಬೀಸಿ ಮೀನು ಹಿಡಿಯುತ್ತಿದ ಮೀನುಗಾರ ಕುಸಿದು ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಹಿರೇಗುತ್ತಿ ನುಶಿಕೋಟೆ ಬಳಿ ನಡೆದಿದೆ.ರಮೇಶ ನಾರಾಯಣ ಹರಿಕಂತ್ರ(48) ಮೃತಪಟ್ಟ ವ್ಯಕ್ತಿ. ಅಘನಾಶಿನಿ ನದಿಯ ಗಜನಿ ಭಾಗದಲ್ಲಿ ಕೈಬಲೆ ಬೀಸಿ ಮೀನುಗಾರಿಕೆ ಮಾಡುತ್ತಿದ್ದ ಸಮಯದಲ್ಲಿ ದಣಿವಾಗಿ ಬಿದ್ದರು ಎನ್ನಲಾಗಿದ್ದು, ತಕ್ಷಣ ಹಿರೇಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಗಿಸಿ ನಂತರ ಕುಮಟಾ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅದರೆ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.