ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಹತ್ಯೆ ಪ್ರಕರಣ ಸಂಬಂಧ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ತನಿಖಾಧಿಕಾರಿಗೆ ಸೂಚಿಸಿ ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ.

ಬೆಂಗಳೂರು: ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಹತ್ಯೆ ಪ್ರಕರಣ ಸಂಬಂಧ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ತನಿಖಾಧಿಕಾರಿಗೆ ಸೂಚಿಸಿ ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ. ಪ್ರಕರಣ ಸಂಬಂಧ ಭಾರತಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಪ್ರಕರಣದ ಐದನೇ ಆರೋಪಿಯಾಗಿರುವ ಬೈರತಿ ಬಸವರಾಜ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ಮಾಡಿದೆ. 

ವಿಚಾರಣೆ ವೇಳೆ ಬೈರತಿ ಪರ ವಕೀಲರು ಹಾಜರಾಗಿ, ಅರ್ಜಿ ಸಂಬಂಧ ಜು.18ರಂದು ಹೈಕೋರ್ಟ್‌ ನೀಡಿದ ನಿರ್ದೇಶನದಂತೆ ತನಿಖಾಧಿಕಾರಿಗಳ ಮುಂದೆ ಅರ್ಜಿದಾರರು ಹಾಜರಾಗಿದ್ದರು. ಈವರೆಗಿನ ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ. ಮುಂದೆಯೂ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧರಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಕಾನೂನು ಪ್ರಕಾರ ತನಿಖೆ ನಡೆಯಲಿದೆ. ತನಿಖೆಗೆ ಅರ್ಜಿದಾರರು ತನಿಖೆಗೆ ಅಗತ್ಯ ಸಹಕಾರ ನೀಡಲಿ. ಆದರೆ ತನಿಖಾಧಿಕಾರಿಗಳು ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸುವಂತಿಲ್ಲ ಎಂದು ಸೂಚಿಸಿ ವಿಚಾರಣೆ ಮುಂದೂಡಿತ್ತು.

ಅರ್ಜಿಯನ್ನು ಜು.18ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಬೈರತಿ ಬಸವರಾಜು ವಿಚಾರಣೆಗೆ ಹಾಜರಾದರೆ ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್‌ (3)(4)(5) ಮತ್ತು ಸತ್ಯೇಂದ್ರ ಕುಮಾರ್‌, ಅರ್ನಬ್‌ ಗೋಸ್ವಾಮಿ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ ನೀಡಿರುವ ತೀರ್ಪಿನ ನಿರ್ದೇಶನಗಳನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿ ಮಧ್ಯಂತರ ಆದೇಶವನ್ನು ಹೊರಡಿಸಿತ್ತು. ಇದೀಗ ಬೈರತಿ ಬಸವರಾಜ್‌ ವಿರುದ್ಧದ ಬಲವಂತದ ಕ್ರಮ ಜರುಗಿಸದಂತೆ ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಿದೆ.