ಕನ್ನಡಪ್ರಭ ವಾರ್ತೆ ಯಳಂದೂರು
ಜಿಲ್ಲೆ ಪುರಾತನ ಧಾರ್ಮಿಕ ಭಕ್ತಿ ಕೇಂದ್ರವಾಗಿರುವ ಹರಿ-ಹರ ಇಬ್ಬರೂ ನೆಲೆಗೊಂಡಿರುವ ಯಳಂದೂರು ತಾಲೂಕಿನ ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದಲ್ಲಿರುವ ಉದ್ಭವ ಗಂಗಾಧರೇಶ್ವರನ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ಜರುಗಿತು.ವೈಷ್ಣವ ಹಾಗೂ ಶೈವ ಸಂಪ್ರದಾಯವನ್ನು ಒಳಗೊಂಡ ಐತಿಹಾಸಿಕ ಪುಣ್ಯಕ್ಷೇತ್ರದಲ್ಲಿ ಶಿವರಾತ್ರಿಯಾದ ಮಾರನೇ ದಿನ ನಡೆಯುವ ಗಂಗಾಧರೇಶ್ವರ ರಥಕ್ಕೆ ಆದಿವಾಸಿ ಸೋಲಿಗರೂ ಸೇರಿ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.
ಮಧ್ಯಾಹ್ನ 12.40ರಿಂದ 12.55 ಗಂಟೆಯೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದ ಶುಭ ಮುಹೂರ್ತದಲ್ಲಿ ರಥಾರೋಹಣ ಮಹೋತ್ಸವ ಸಂಪನ್ನಗೊಂಡಿತು. ನೆರೆದಿದ್ದ ಭಕ್ತರು ಹರ ಹರ ಮಹಾದೇವ ಎಂಬ ಉದ್ಗಾರದೊಂದಿಗೆ ತೇರನ್ನು ದೇಗುಲದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಸ್ವಸ್ಥಾನಕ್ಕೆ ತಂದರು. ಇದಾದ ಬಳಿಕ ಪ್ರಭಾವಳಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು 400 ವರ್ಷಕ್ಕೂ ಹಳೆಯದಾದ ಹಿತ್ತಾಳೆಯ ಬಸವ ವಾಹನದ ಮೇಲೆ ಕುಳ್ಳಿರಿಸಿ ದೇಗುಲದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಮಾಡಲಾಯಿತು.ರಥೋತ್ಸವ ಮುಗಿಯುತ್ತಿದ್ದಂತೆಯೇ ದೇಗುಲದ ಮುಂಭಾಗದಲ್ಲಿರುವ ಆವರಣದಲ್ಲೇ ಪ್ರಸಾದ ವಿನಿಯೋಗ ಮಾಡುವ ಪರಿಪಾಠವಿದ್ದು ಇಲ್ಲಿ ಸಾವಿರಾರು ಭಕ್ತರು ಕೆಳಗೆ ಕುಳಿತುಕೊಂಡೆ ಪ್ರಸಾದ ಸ್ವೀಕರಿಸಿದರು. ಇದಕ್ಕೂ ಮುಂಚೆ ಪಟ್ಟಣದ ಉಪಖಜಾನೆ ಕಾರ್ಯಾಲಯದಿಂದ ಮೈಸೂರು ಮಹಾರಾಜರು ನೀಡಿರುವ ಸ್ವರ್ಣಕೊಳಗವನ್ನು ಮಂಗಳವಾದ್ಯಗಳ ಸಮೇತ ಮೆರವಣಿಗೆ ಮೂಲಕ ದೇಗುಲಕ್ಕೆ ಕೊಂಡೊಯ್ದು ಧಾರಣೆ ಮಾಡಲಾಯಿತು. ಹರಕೆ ಹೊತ್ತ ಭಕ್ತರು ದಂಡುಗೋಲು ಸೇವೆ ನೆರವೇರಿಸಿದರು. ಸಾವಿರಾರು ಭಕ್ತರು ಈ ಉತ್ಸವದಲ್ಲಿ ಭಾಗವಹಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಈ ವೇಳೆ ಶಾಸಕ ಎ.ಆರ್. ಕೃಷ್ಣಮೂರ್ತಿ ದಂಡುಗೋಲನ್ನು ಹಿಡಿದು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದ್ದು ವಿಶೇಷವಾಗಿತ್ತು. ಇದಕ್ಕೆ ಜಿಲ್ಲಾ ಗ್ಯಾರಂಟಿ ಯೋಜನೆ ಅನಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಜಿ.ಪಂ. ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಸದಸ್ಯರಾದ ಗುಂಬಳ್ಳಿ ರಾಜಣ್ಣ, ಕೇತಮ್ಮ, ತಹಸೀಲ್ದಾರ್ ಎಸ್.ಎಲ್. ನಯನ ಕಾರ್ಯನಿರ್ವಾಹಕ ಅಧಿಕಾರಿ ಎನ್. ಸುರೇಶ್, ರಾಜಣ್ಣ. ಶೇಷಾದ್ರಿ, ಬಾದ್ರಿರಾಮು, ರಂಗನಾಥ್, ವೆಂಕಟೇಶ್ ಪಿಡಿಒ ಶಶಿಕಲಾ ಸೇರಿ ಅನೇಕರು ಸಾಥ್ ನೀಡಿದರು. ಬುಡಕಟ್ಟು ಸೋಲಿಗ ಜನಾಂಗದವರು ರಥವನ್ನು ಅಲಂಕರಿಸುವ ಜವಾಬ್ದಾರಿ ಹೊತ್ತಿದ್ದರು. ಪೊಲೀಸ್ ಇಲಾಖೆಯ ಸಿಪಿಐ ಸುಬ್ರಹ್ಮಣ್ಯ, ಪಿಐಎಸ್ ಆಕಾಶ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.