ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿ ನಿರ್ಮೂಲನೆಗೆ ದೇಶದ ಕಾನೂನಿನ ಬೆಂಬಲದ ಜೊತೆಗೆ ಇತರೆ ಸಮಾಜದ ಸಹಕಾರವೂ ಅಗತ್ಯವೆಂದು ಹುಣಸೂರು ಉಪವಿಭಾಗ ಮಟ್ಟದ ಎಸ್ಸಿ, ಎಸ್ಟಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ ಅಭಿಪ್ರಾಯಪಟ್ಟರು.ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಬಿಳಿಕೆರೆ ಹೋಬಳಿ ಮಟ್ಟದ ಅಸ್ಪೃಶ್ಯತಾ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾವಿರಾರು ವರ್ಷಗಳಿಂದ ನೆಲೆ ನಿಂತಿರುವ ಅಸ್ಪೃಶ್ಯತೆ ಎಂಬ ಪಿಡುಗನ್ನು ನಿರ್ಮೂಲನೆ ಮಾಡಲು ಕಾನೂನಿನ ಜೊತೆಗೆ ಇತರೆ ಸಮುದಾಯಗಳು ದಲಿತರನ್ನು ನೋಡುವ ಮನಸ್ಥಿತಿ ಬದಲಾಗಬೇಕು. ಕಾನೂನಿನ ಪ್ರಕಾರ ಅಸ್ಪೃಶ್ಯತೆ ನಿಷೇಧಿಸಲ್ಪಟ್ಟರೂ ಇಂದಿಗೂ ಕೆಲವು ಹಳ್ಳಿಗಳಲ್ಲಿ ದಲಿತರಿಗೆ ದೇವಸ್ಥಾನ, ಕ್ಷೌರದ ಅಂಗಡಿ, ಹೊಟೇಲ್‌ಗಳಿಗೆ ನಿರ್ಬಂಧ ಹಾಕಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ವಿಷಾದಿಸಿದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಅಸ್ಪೃಶ್ಯತೆ ಎಂಬುವುದು ಪದ್ಧತಿಯ ಜೊತೆಗೆ ಒಂದು ಮಾನಸಿಕ ರೋಗವಾಗಿದ್ದು, ಇಂದಿಗೂ ಈ ಪದ್ಧತಿ ಕೆಲವು ಕಡೆ ಜೀವಂತವಾಗಿರುವುದು ದುರ್ದೈವವೇ ಸರಿ. ಅಸ್ಪೃಶ್ಯತೆ ನಿರ್ಮೂಲನೆ ಬಗ್ಗೆ ಇತರ ಸಮುದಾಯದ ಜನರು ಹೆಚ್ಚು ಮಾತನಾಡಬೇಕು. ಆ ದಿಕ್ಕಿನಲ್ಲಿ ದಲಿತರಲ್ಲಿ ಆತ್ಮಸ್ಥೈರ್ಯ ತುಂಬಿ ಸಮ ಸಮಾಜದ ಕನಸನ್ನು ಕಾಣಬೇಕಾಗಿದೆ ಎಂದರು. ವಕೀಲೆ ಪವಿತ್ರಾ ಲೋಕೇಶ್, ಪ. ಜಾತಿ, ಪಂಗಡದ ದೌರ್ಜನ್ಯ ನಿಷೇಧ ಕಾಯ್ದೆ, ಮಹಿಳೆಯರ ಸಂರಕ್ಷಣಾ ಕಾಯ್ದೆ, ಅಸ್ಪೃಶ್ಯತೆ ನಿರ್ಮೂಲನೆಗಳ ಬಗ್ಗೆ ಕಾನೂನುಗಳ ವಿಚಾರ ಮಂಡಿಸಿದರೆ, ಜಿಲ್ಲಾ ಮಕ್ಕಳ ಸಂರಕ್ಷಣಾ ಇಲಾಖೆಯ ರಘು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಶೋಷಣೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಮಾಜ ಕಲ್ಯಾಣಾಧಿಕಾರಿ ಅಶೋಕ್ ಕುಮಾರ್, ಬಿಳಿಕೆರೆ ಗ್ರಾಪಂ ಅಧ್ಯಕ್ಷೆ ತಾಯಮ್ಮ, ಚಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಚನ್ನಮ್ಮ, ಹಳೇಬೀಡು ಗ್ರಾಪಂ ಅಧ್ಯಕ್ಷ ಮಲ್ಲೇಶ್, ಪಿಡಿಒಗಳಾದ ಎಚ್.ಜಿ. ಮಹದೇವಸ್ವಾಮಿ, ರಾಮಣ್ಣ, ರೂಪಶ್ರೀ, ಮಂಜುಳಾ, ಯಶೋಧಾ, ನವೀನ್, ಮುಖಂಡರಾದ ಮುಖಂಡ ಶಿವಶಂಕರ್, ಮಹೇಶ್, ಕೆಂಪರಾಜು, ಕೃಷ್ಣ, ರಾಚಯ್ಯ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಗ್ರಾಪಂ ಸಿಬ್ಬಂದಿ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.