ಸಾರಾಂಶ
ವ್ಯಾಪಾರ, ವಾಣಿಜ್ಯೋದ್ಯಮಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ ಹಾಗೂ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಇರಬೇಕೆಂಬ ಉದ್ದೇಶದಿಂದ ರೂಪಿಸಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2024’ಅನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿತು.
ಕನ್ನಡಪ್ರಭ ವಾರ್ತೆ ವಿಧಾನಸಭೆ
ಅಂಗಡಿ, ಮುಂಗಟ್ಟು, ಹೋಟೆಲ್ ಸೇರಿದಂತೆ ಎಲ್ಲ ರೀತಿಯ ವ್ಯಾಪಾರ, ವಾಣಿಜ್ಯೋದ್ಯಮಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ ಹಾಗೂ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಇರಬೇಕೆಂಬ ಉದ್ದೇಶದಿಂದ ರೂಪಿಸಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2024’ಅನ್ನು ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಪರವಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಈ ವಿಧೇಯಕವನ್ನು ಸದನದಲ್ಲಿ ಮಂಡಿಸಿದರು.
ವಿಧೇಯಕದಲ್ಲಿ ಪ್ರಮುಖವಾಗಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಹಾಗೂ ಕನ್ನಡ ಭಾಷೆಯೇ ಮೇಲ್ಭಾಗದಲ್ಲಿ ಇರಬೇಕೆಂಬ ಅಂಶಗಳಷ್ಟೇ ಅಲ್ಲದೆ, 100ಕ್ಕೂ ಹೆಚ್ಚು ಉದ್ಯೋಗಿಗಳಿರುವ ರಾಜ್ಯ, ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಕನ್ನಡ ಕೋಶ ಸ್ಥಾಪಿಸಬೇಕು.
ರಾಜ್ಯದ ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ಸಾರ್ವಜನಿಕರ ಜೊತೆಗಿನ ಸಂಪರ್ಕ, ಪತ್ರ ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯ.
ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಹಿರಿಯ ಉದ್ಯೋಗಿಗಳ ನೇತೃತ್ವದ ಕನ್ನಡ ಕೋಶ, ಕನ್ನಡ ಬಾರದ ಉದ್ಯೋಗಿಗಳಿಗೆ ಕನ್ನಡ ಕಲಿಸಲು ಕನ್ನಡ ಕಲಿಕಾ ಘಟಕ ಸ್ಥಾಪಿಸಬೇಕೆಂಬುದು ಸೇರಿದಂತೆ ಸಮಗ್ರ ಕನ್ನಡ ಅಭಿವೃದ್ಧಿಗೆ ಪೂರಕವಾಗಿ ಹಲವು ಅಂಶಗಳನ್ನು ಸೇರಿಸಲಾಗಿದೆ.
ನಾಮಫಲಕದಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಿದ್ದವು. ಈ ವೇಳೆ ಹಲವು ಹೋರಾಟಗಾರರನ್ನು ಬಂಧಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಕನ್ನಡ ಸಂಘಟನೆಗಳ ಒತ್ತಡಕ್ಕೆ ಮಣಿದು ಕನ್ನಡ ಕಡ್ಡಾಯ ಕಾನೂನು ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿ ಈ ಸಂಬಂಧ ಕಳೆದ ಜನವರಿಯಲ್ಲೇ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿತ್ತು.
ಆದರೆ, ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕದೆ ಅಧಿವೇಶನದಲ್ಲಿ ಈ ಕುರಿತು ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯುವಂತೆ ಸಲಹೆ ನೀಡಿ ಕಡತ ವಾಪಸ್ ಕಳುಹಿಸಿದ್ದರು.
ಈಗ ಸರ್ಕಾರ ವಿಧೇಯಕವನ್ನು ಸದನದಲ್ಲಿ ಮಂಡಿಸಲಾಗಿದ್ದು ಪರ್ಯಾಲೋಚನೆ ಮೂಲಕ ಸದನದ ಒಪ್ಪಿಗೆ ಪಡೆದು ಜಾರಿಗೊಳಿಸಬೇಕಾಗಿದೆ.