ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನವನ್ನು ವಿವಿಧ ಬಣ್ಣ, ತೋರಣ ಕಟ್ಟಿ ಚಪ್ಪರ
ಕನ್ನಡಪ್ರಭ ವಾರ್ತೆ ಸರಗೂರು
ತಾಲೂಕಿನ ಮೊಳೆಯೂರು ಗ್ರಾಮದಲ್ಲಿ ಭಾನುವಾರ ಶ್ರೀ ಬಿಲ್ ಕುಮಾರಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವ ಅಂಗವಾಗಿ ರಥೋತ್ಸವ, ಅಸ್ತಮ್ಮ ಕೊಂಡೋತ್ಸವ ಹಾಗೂ ಗ್ರಾಮ ದೇವತೆ ಮಾರಮ್ಮನಿಗೆ ವಿಶೇಷ ಪೂಜೆ ಜರುಗಿತು.ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನವನ್ನು ವಿವಿಧ ಬಣ್ಣ, ತೋರಣ ಕಟ್ಟಿ ಚಪ್ಪರ ಹಾಕಲಾಗಿತ್ತು. ಇಡೀ ಗ್ರಾಮವು ವಿದ್ಯುತ್ ದೀಪಾಲಂಕರದಿಂದ ಜಗಮಗಿಸುತ್ತಿತ್ತು.
ದೇವರ ವಿಗ್ರಹಕ್ಕೆ ಗಂಗೆ ಸ್ನಾನ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಈ ನಡುವೆ ಭಕ್ತರಿಂದ ವಿವಿಧ ಸೇವಾ ಕಾರ್ಯಗಳು ಜರುಗಿತು. ವಾದ್ಯಗೋಷ್ಠಿಗಳು ಮೊಳಗಿದವು.ಗಂಗೆ ತಾಣದಿಂದ ದೇವರ ವಿಗ್ರಹವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸತ್ತಿಗೆ ಸುರಪಾಣಿ ಸೇರಿದಂತೆ ಇನ್ನಿತರ ಕಲಾ ಪ್ರಕಾರಗಳು ಭಾಗಿಯಾಗಿದ್ದವು. ನಂತರ ದೇವರಮೂರ್ತಿಯನ್ನು ದೇವಸ್ಥಾನದ ಬಳಿಗೆ ಮೆರವಣಿಗೆ ಮೂಲಕ ತರಲಾಯಿತು. ದಾರಿಯುದ್ದಕ್ಕೂ ಭಕ್ತ ರಿಂದ ವಿವಿಧ ಭಜನಾ ಕಾರ್ಯಕ್ರಮ ನಡೆಯಿತು.
ನಂತರ ದೇವಸ್ಥಾನದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸೋಮವಾರ ಮಾರಮ್ಮರವರ ಮಡೆ, ಗುರುವಾರ ಬಿಲ್ ಕುಮಾರಸ್ವಾಮಿಯ ಮಡೆ, ಭಾನುವಾರ ಅಸ್ತಮ್ಮನವರ ಕೊಂಡೋತ್ಸವ ಅದ ನಂತರ ಜಾತ್ರೆ ನಡೆಯುತ್ತದೆ.ಅಸ್ತಮ್ಮ ದೇವಸ್ಥಾನದ ಮುಂಭಾಗ ಕೊಂಡೋತ್ಸವ ನಡೆಯಿತು. ಕೊಂಡೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು ದೇವರ ಕೃಪೆಗೆ ಪಾತ್ರ ರಾದರು. ವಿವಿಧ ರೀತಿಯಲ್ಲಿ ಭಕ್ತರು ಹರಕೆ ತಿರಿಸಿದರು. ನಂತರ ಬಿಲ್ ಕುಮಾರಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಿಲ್ ಕುಮಾರಸ್ವಾಮಿ ದೇವರನ್ನು ಮೆರವಣಿಗೆ ನಡೆಸಲಾಯಿತು.ಜಾತ್ರಾ ಮಹೋತ್ಸವಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿದ್ದರು. ಜಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮೊಳೆಯೂರಿನ ಗುಡಿಗೌಡ್ರು, ಯಜಮಾನರು, ಗ್ರಾಮಸ್ಥರು ಸೇರಿದಂತೆ ಅಕ್ಕ ಪಕ್ಕದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.