ಕನ್ನಡಪ್ರಭ ವಾರ್ತೆ ವಿಧಾನಸಭೆ
ಅಂತರ್ ಜಾತಿ ಮದುವೆ ಸಂದರ್ಭದಲ್ಲಿ ಮರ್ಯಾದೆಗೇಡು ಹತ್ಯೆ, ಹಲ್ಲೆ, ಬಹಿಷ್ಕಾರದಂಥ ಘಟನೆಗಳನ್ನು ತಡೆಯುವ ‘ಇವ ನಮ್ಮ ಇವ ನಮ್ಮವ ವಿಧೇಯಕ-2026’ಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.ಜಾತಿ, ಮರ್ಯಾದೆ, ಸಂಪ್ರದಾಯದ ಹೆಸರಿನಲ್ಲಿ ಯಾವುದೇ ವ್ಯಕ್ತಿಗಳ ವಿವಾಹದ ಹಕ್ಕು ಉಲ್ಲಂಘಿಸಿ ಹಿಂಸೆ, ಕಿರುಕುಳ, ಬೆದರಿಕೆ ಮತ್ತು ಸಾಮಾಹಿಕ ಬಹಿಷ್ಕಾರ ಹಾಕುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲು ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ-2026’ ದಲ್ಲಿ ಪ್ರಸ್ತಾಪಿಸಲಾಗಿದೆ.
ವಿಧೇಯಕ ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, 12ನೇ ಶತಮಾನದಲ್ಲಿ ಬಸವಣ್ಣ ಇವನಾರವ ಇವನಾರವ ಎಂದೆನಿಸದಿರಯ್ಯ ಎಂದು ಹೇಳಿದ್ದಾರೆ. ಆಗಿನಿಂದ ಇಲ್ಲಿಯವರೆಗೆ ಹಲವು ಸಮಾಜ ಸುಧಾರಕರು ಸಂದೇಶ ನೀಡಿದ್ದರೂ ಜಾತಿ, ಧರ್ಮದ ಆಧಾರದ ಮೇಲೆ ತಾರತಮ್ಯ ಮುಂದುವರೆದಿದೆ. ಜತೆಗೆ ಅಂತರ್‌ಜಾತಿ ವಿವಾಹದ ಸಂದರ್ಭದಲ್ಲಿ ಹತ್ಯೆ, ಹಲ್ಲೆ, ಬಹಿಷ್ಕಾರದಂತಹ ಅಮಾನವೀಯ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಯಲು ವಿಧೇಯಕ ತಂದಿದ್ದೇವೆ ಎಂದು ಹೇಳಿದರು.ಮರ್ಯಾದೆಗೇಡು ಹತ್ಯೆಗೆ ಸಹಕಾರ ನೀಡಿದವರಿಗೆ, ಕಾರಣರಾದವರಿಗೆ ಶಿಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ವಿಧೇಯಕದಲ್ಲಿ ಸೆಕ್ಷನ್-4 ಅಡಿ ವಿವಾಹ ಆಗಲು ಬಯಸುವವರು ತಮ್ಮ ವಯಸ್ಸು, ಒಟ್ಟಿಗೆ ಇರಲು ಸಮ್ಮತಿ ದೃಢೀಕರಿಸಬೇಕು. ಅವರಿಗೆ ಜಿಲ್ಲಾಧಿಕಾರಿಗಳು ಅಥವಾ ಅವರ ಪ್ರತಿನಿಧಿ ಅಧಿಕಾರಿ ಎದುರು ಮದುವೆ ಆಗಲು ವೇದಿಕೆ ಕಲ್ಪಿಸಲಾಗುತ್ತದೆ. ಈ ಬಿಲ್ ಲಿವಿಂಗ್ ಟುಗೆದರ್ ಸಂಸ್ಕೃತಿಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್, ‘ಕೊಲೆ ಪ್ರಕರಣಕ್ಕೆ ಸಹಜವಾಗಿಯೇ ಬಿಎನ್‌ಎಸ್‌ಎಸ್ ಅಡಿ ಜೀವಾವಧಿ ಶಿಕ್ಷೆ ಆಗುತ್ತಿತ್ತು. ಮರ್ಯಾದೆಗೇಡು ಹತ್ಯೆಗೆ 5 ವರ್ಷ ಶಿಕ್ಷೆ ಎಂದು ಹೇಳಿದ್ದೀರಿ. ಇದು ದುರ್ಬಳಕೆಗೆ ಅವಕಾಶ ಮಾಡಿಕೊಡುವಂತಾಗಲಿದೆ. ಅಂತರ್‌ಜಾತಿ ಕೊಲೆಯಲ್ಲಿ ಸಾಕ್ಷ್ಯಾಧಾರಗಳಿಲ್ಲದೆ ಖುಲಾಸೆ ಆಗುತ್ತಿವೆ. ಅಂಥದ್ದನ್ನು ತಪ್ಪಿಸಲು ಏನಾದರೂ ಮಾಡಿ. ನಾಮ್ ಕೇ ವಾಸ್ತೆಗೆ ಮಾಡಬೇಡಿ’ ಎಂದು ಹೇಳಿದರು.
ಬಿಜೆಪಿಯ ಎಸ್.ಸುರೇಶ್ ಕುಮಾರ್, ಇಂತಹ ವಿಧೇಯಕವನ್ನು ತರಾತುರಿಯಲ್ಲಿ ತರುವುದು ಸರಿಯಲ್ಲ. ಹತ್ಯೆ ವಿರುದ್ಧ ಕ್ರಮಕ್ಕೆ ಬಿಎನ್‌ಎಸ್‌ಎಸ್ ಅಡಿ ಅವಕಾಶವಿರುವಾಗ ವಿಧೇಯಕ ಏಕೆ ತಂದಿದ್ದೀರಿ? ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಸದನ ಸಮಿತಿ ರಚಿಸಿ ಎಂದು ಹೇಳಿದರು.ಎಚ್.ಕೆ. ಪಾಟೀಲ್, ಈ ಕಾನೂನು ಅವಸರದಲ್ಲಿ ತಂದಿದ್ದು ಅಲ್ಲ. ಇದು ಬರೀ ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದ್ದೂ ಅಲ್ಲ. ಸಾಮಾಜಿಕ ಬಹಿಷ್ಕಾರ ನಿಷೇಧಿಸುವುದು. ಅಂತಹ ಬಹಿಷ್ಕಾರ ಹಾಕುವವರ ವಿರುದ್ಧ ಶಿಕ್ಷೆ ನೀಡುವುದು. ಜತೆಗೆ ಅಂತರ್‌ಜಾತಿ ವಿವಾಹವಾದ ಮಗಳು ಸತ್ತಿದ್ದಾಳೆ ಎಂದು ತಿಥಿ ಮಾಡುವಂತಹ ಹೀನ ಕೃತ್ಯಗಳನ್ನು ಶಿಕ್ಷಾರ್ಹ ಅಪರಾಧ ಎಂದು ಮಾಡಲಾಗಿದೆ.
ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮದುವೆ ಆಗಲು ವೇದಿಕೆ ಕಲ್ಪಿಸಿಕೊಡುತ್ತಿದ್ದೇವೆ. ಜೋಡಿಗೆ ರಕ್ಷಣೆ ಒದಗಿಸಲು ಸಹ ಬಿಲ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಬಿಎನ್‌ಎಸ್‌ಎಸ್ ಕಾಯಿದೆ ತಿಳಿಗೊಳಿಸುವ ಯಾವುದೇ ಅಂಶ ಇದರಲ್ಲಿ ಇಲ್ಲ. ಇಂಥ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.