ಸಾರಾಂಶ
ಕ್ಯಾಪ್ಟನ್ ಗೋಲರ್ನ್ ಟ್ರೇಡಿಂಗ್ ಕಂಪನಿ ಮಾಲೀಕ ಉತ್ಕರ್ಷ ವರ್ಧಮಾನೆ ಮತ್ತು ಅವರ ಪತ್ನಿ ಸಾವಿತ್ರಿ ವರ್ಧಮಾನೆ ಕೋಟ್ಯಂತರ ರುಪಾಯಿ ವಂಚನೆ ಮಾಡಿದ್ದಾರೆ
ಕಲಬುರಗಿ: ಹಣ ಡಬಲ್ ಮಾಡುವುದಾಗಿ ಹೇಳಿ ಕೋಟ್ಯಂತರ ರುಪಾಯಿ ವಂಚನೆ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ.
ಕ್ಯಾಪ್ಟನ್ ಗೋಲರ್ನ್ ಟ್ರೇಡಿಂಗ್ ಕಂಪನಿ ಮಾಲೀಕ ಉತ್ಕರ್ಷ ವರ್ಧಮಾನೆ ಮತ್ತು ಅವರ ಪತ್ನಿ ಸಾವಿತ್ರಿ ವರ್ಧಮಾನೆ ಕೋಟ್ಯಂತರ ರುಪಾಯಿ ವಂಚನೆ ಮಾಡಿದ್ದಾರೆ ಎಂದು ಕಲಬುರಗಿ ತಾಲೂಕಿನ ಕುರಿಕೋಟಾ ಗ್ರಾಮದ ವೀರೇಶ ಭೀಮಾಶಂಕರ ಭಾಗೋಡಿ (24) ಎಂಬುವವರು ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.ಉತ್ಕರ್ಷ ವರ್ಧಮಾನೆ ಮತ್ತು ಅವರ ಪತ್ನಿ ಸಾವಿತ್ರಿ ವರ್ಧಮಾನೆ ಅವರು ನಗರದ ಗಾಂಧಿ ನಗರ ಕಮಾನ್ ಎದರುಗಡೆ ಬಿ.ಎಲ್. ಕಾಂಪ್ಲೆಕ್ಸ್‌ನಲ್ಲಿ ಒಂದು ಆಫೀಸ್ ಮಾಡಿಕೊಂಡು ₹1 ಲಕ್ಷ ತುಂಬಿದರೆ ಒಂದು ವರ್ಷದಲ್ಲಿ ₹2 ಲಕ್ಷ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಇದನ್ನು ನಂಬಿ ಮೊದಲು ಒಂದು ಲಕ್ಷ, ನಂತರ ₹2 ಲಕ್ಷ ಸೇರಿ ₹2.5 ಲಕ್ಷ ಹಣ ನೀಡಿದ್ದೇನೆ. ಅದೇ ರೀತಿ ಮಹ್ಮದ್ ಇಬ್ರಾಹಿಮ್, ಗುಂಡಪ್ಪ ವಾರದ, ಚಂದ್ರಕಾಂತ ರಾಠೋಡ್, ಸುನಿತಾ, ಶರಣು ಎಂಬುವವರು ಸೇರಿ ಇತರರು ಸುಮಾರು ₹30 ಕೋಟಿಗೂ ಹೆಚ್ಚು ಹಣವನ್ನು ಉತ್ಕರ್ಷ ವರ್ಧಮಾನೆ ಅವರಿಗೆ ನೀಡಿದ್ದಾರೆ. ಈ ಹಣವನ್ನು ಉತ್ಕರ್ಷ ವರ್ಧಮಾನೆ ಮತ್ತು ಅವರ ಪತ್ನಿ ಸಾವಿತ್ರಿ ವರ್ಧಮಾನೆ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ವರ್ಧಮಾನೆ ಅವರ ಸಂಬಂಧಿಕರಾದ ಸುಧಾ ಠಾಕೂರ ಮತ್ತು ವಿಜಯಸಿಂಗ್ ಹಜಾರೆ (ಸನ್ನಿ) ಅವರು ಭಾಗಿಯಾಗಿದ್ದು, ಅವರ ವಿರುದ್ಧವು ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ರೋಜಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.